

ಮಡಿಕೇರಿ:
ಜಿಲ್ಲೆಯ ವಸತಿರಹಿತ ಬುಡಕಟ್ಟು ಸಮಾಜದ ನಿವಾಸಿಗಳಿಗೆ ನಿವೇಶನ ಕೊಡುವ ಸಲುವಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಭಿಯಾನ ನಡೆಸಲಾಗುತ್ತಿದ್ದು, ಹಕ್ಕುಪತ್ರ ವಿತರಿಸಲು ಸುಮಾರು 60 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.
ಕ್ಷೇತ್ರದ ಶಾಸಕನಾಗಿ 2 ವರ್ಷಗಳಾದರೂ ಬಡಜನರಿಗೆ ನಿವೇಶನ ಮತ್ತು ಹಕ್ಕುಪತ್ರ ಕೊಡಿಸಲು ಆಗಿಲ್ಲ ಎನ್ನುವ ಕೊರಗು ಇತ್ತು. ಈ ಹಿನ್ನೆಲೆಯಲ್ಲಿ ಗುರುವಾರ (ಜು.10) ವಿರಾಜಪೇಟೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಲಾಗಿದೆ. ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನ ರಹಿತ 1590 ಫಲಾನುಭವಿಗಳನ್ನು ಗುರುತಿಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ಅಭಿಯಾನ ಮುಗಿಯಲಿದ್ದು, ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಅವರನ್ನು ಜಿಲ್ಲೆಗೆ ಕರೆಯಿಸಿ ಎಲ್ಲರಿಗೂ ಹಕ್ಕುಪತ್ರ ವಿತರಿಸಲಾಗುವುದು ಎಂದು ಶುಕ್ರವಾರ ಮಡಿಕೇರಿಯ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿವೇಶನಕ್ಕಾಗಿ ಗುರುತಿಸಲಾದ 60 ಎಕರೆ ಜಾಗದ ಪೈಕಿ ಕೆಲವು ಕಡೆ ಅರಣ್ಯ ಇಲಾಖೆಯ ಆಕ್ಷೇಪ ಇದೆ. ಅವರು ಸಹಕರಿಸಿದೆ 2 ಸಾವಿರ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬಹುದಾಗಿದೆ. ಫಲಾನುಭವಿಗಳಿಗೆ ಅವರಿರುವ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನಗಳನ್ನು ಕೊಡಲು ಪ್ರಯತ್ನಿಸಲಾಗುತ್ತಿದೆ. ನಿವೇಶನರಹಿತ ಎಲ್ಲ ಸಮುದಾಯದವರಿಗೂ ಹಕ್ಕುಪತ್ರ ವಿತರಿಸುವ ಆಕಾಂಕ್ಷೆ ಇದೆ. ಆದರೆ ಇದಕ್ಕೆ ಸುಮಾರು 110 ಎಕರೆ ಜಾಗ ಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ಕೆಲವು ಕಡೆಗಳಲ್ಲಿ ನಿವೇಶನ ರಹಿತರು ಅರಣ್ಯ ಅಥವಾ ಕಂದಾಯ ಜಾಗದಲ್ಲಿ ಶೆಡ್ ಹಾಕಿಕೊಂಡು ವಾಸ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಮಾಡಬಾರದು. ಸ್ವಲ್ಪ ತಾಳ್ಮೆಯಿಂದ ಕಾಯಬೇಕು. ಎಲ್ಲಾ ನಿವೇಶನ ರಹಿತರಿಗೂ ನಿವೇಶನ ಕೊಡಲಾಗುವುದು ಎಂದರು.
ಆನೆ-ಮಾನವ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಸಂಬAಧಿಸಿದ ಡಿಸಿಎಫ್, ಎಸಿಎಫ್, ಆರ್‌ಎಫ್ ಕರೆಸಿ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. ಈ ಬೆನ್ನಲ್ಲೇ ತಿತಿಮತಿ, ಮಾಯಮುಡಿ ಭಾಗದಲ್ಲಿ ಗುರುವಾರದಿಂದಲೇ ಆನೆÀಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಆರಂಭವಾಗಿದೆ.
ಬ್ಯಾರಿಕೇಡ್ ಅಳವಡಿಸಲು, ಕಂದಕ ತೋಡಲು ಸಮಯ ಹಿಡಿಯುತ್ತದೆ. ಹಾಗಾಗಿ ಸದ್ಯ ಇರುವ ಸಂಪನ್ಮೂಲ ಬಳಸಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಒಂದು ಆನೆ ಹಿಂಡನ್ನು ಈಗಾಗಲೇ ಕಾಡಿಗೆ ಕಳಿಸಲಾಗಿದೆ.
ಹುಲಿ ಸಮಸ್ಯೆಯೂ ಹೆಚ್ಚಾಗಿದೆ. ನಾಲ್ಕು ಹುಲಿಗಳನ್ನು ಹಿಡಿಯಲು ಅನುಮತಿ ಇದೆ. ಆದರೆ ಹಿಡಿಯಲು ಆಗುತ್ತಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಅಧ್ಯಕ್ಷ ಪೊನ್ನಪ್ಪ ಇದ್ದರು.