

ಮಡಿಕೇರಿ:
ಅಭಿವೃದ್ಧಿ ಕಾಮಗಾರಿಗಳು ಕಳಪೆ ಎಂದು ಕಂಡು ಬಂದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ. 12 ಕೋಟಿ ರೂ. ವೆಚ್ಚದಲ್ಲಿ ಭಾಗಮಂಡಲ-ಕರಿಕೆ ರಾಜ್ಯ ಹೆದ್ದಾರಿ 273ರ ರಸ್ತೆ ಮರು ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಕಾಮಗಾರಿಯಲ್ಲಿ ಗುಣಮಟ್ಟ ಕಳಪೆಯಾಗದ ಹಾಗೆ ಸ್ಥಳೀಯ ನಾಗರೀಕರು ಜಾಗೃತಿ ವಹಿಸಬೇಕು. ಅನುದಾನಗಳು ಸಾರ್ವಜನಿಕ ತೆರಿಗೆ ಹಣ. ಹಾಗಾಗಿ ಸರ್ಕಾರಿ ಕೆಲಸದ ಬಗ್ಗೆ ಸಾರ್ವಜನಿಕರು ಮುತುವರ್ಜಿ ವಹಿಸಬೇಕು ಎಂದರು. ಇದೇ ವೇಳೆ ಬೆಟ್ಟಗೇರಿಗೆ ಭೇಟಿ ನೀಡಿದ್ದ ಪೊನ್ನಣ್ಣ ಸ್ಥಳೀಯರೊಂದಿ ಮಾತನಾಡಿ ಈಗಾಗಲೇ ಬೆಟ್ಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ಒಂದು ಕೋಟಿ ಹತ್ತು ಲಕ್ಷ ರೂ.ಗಳ ಅನುದಾನ ಒದಗಿಸಿದ್ದು 70 ಲಕ್ಷ ರೂ.ಗಳ ಕಾಮಗಾರಿ ಮುಗಿದಿದ್ದು 40 ಲಕ್ಷ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸ್ಥಳೀಯ ಆಟೋ ಚಾಲಕರು ರಸ್ತೆ ಬದಿ ಸ್ಲಾಬ್ ಅಳವಡಿಕೆಗೆ ಮನವಿ ಮಾಡಿದರು. ಬೆಟ್ಟಗೇರಿ ಗ್ರಾಮದಲ್ಲಿ ಜಲಜೀವನ್ ಯೋಜನೆ ಸಮರ್ಪಕವಾಗಿ ಆಗದೆ ಇರುವ ಬಗ್ಗೆ ಸ್ಥಳೀಯರು ಶಾಸಕರ ಗಮನಕ್ಕೆ ತಂದರು. ಕಸ ವಿಲೇವಾರಿ ಘಟಕ ಸ್ಥಗಿತಗೊಂಡಿರುವ ವಿವರಗಳನ್ನು ನೀಡಿದರು.
ನಂತರ ಅವಂದೂರು ಗ್ರಾಮದ ಗೋಪಾಲಕೃಷ್ಣ ದೇವಾಲಯದ ಕಾಮಗಾರಿ ವೀಕ್ಷಿಸಿ ಗ್ರಾಮದ ಜನತೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ನನಗೆ ಯಾವ ಗ್ರಾಮದಲ್ಲಿ ಮತ ಎಷ್ಟು ಬಂದಿದೆ ಎನ್ನುವುದಕ್ಕೆ ಆದ್ಯತೆ ನೀಡದೆ ಯಾವ ಗ್ರಾಮದಲ್ಲಿ ಏನು ಅಭಿವೃದ್ಧಿ ಆಗಬೇಕು ಎಂಬ ವಿಚಾರಕ್ಕೆ ಆದ್ಯತೆ ನೀಡುತ್ತೇನೆ. ವೈಯಕ್ತಿಕ ಬದುಕು ಮತ್ತು ಸಾರ್ವಜನಿಕ ಬದುಕು ಎರಡರಲ್ಲೂ ಜಾತಿ,ಮತ,ಪಕ್ಷ ಭೇದ ಹೊರತಾದ ಜೀವನವನ್ನು ನಡೆಸಿಕೊಂಡು ಮುಂದಕ್ಕೂ ಅದೇ ರೀತಿಯಲ್ಲಿ ನಡೆಯುತ್ತೇನೆ ಎಂದರಲ್ಲದೆ ದೇವಸ್ಥಾನದ ಅಭಿವೃದ್ಧಿಗೆ ವೈಯಕ್ತಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ದೇವಾಲಯದ ಜಮೀನನ್ನು ದೇವಾಲಯದ ಸಮಿತಿ ಹೆಸರಿಗೆ ವರ್ಗಾಯಿಸಿದ ಮೇಲೆ ಸರ್ಕಾರದಿಂದ ದೊಡ್ಡ ಮೊತ್ತದ ನೆರವು ಕೊಡಿಸಲು ಬದ್ದನಿದ್ದೇನೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಗ್ರಾಮಸ್ಥರು ತಮ್ಮ ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಸಲ್ಲಿಸಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷರು, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು, ಪ್ರಮುಖರಾದ ಕೊಲ್ಯದ ಗಿರೀಶ್, ಕೇಟೋಳಿ ಮೋಹನ್ ರಾಜ್, ತೆನ್ನಿರ ಮೈನಾ, ಕೊಡಗನ ತೀರ್ಥ ಪ್ರಸಾದ್, ನಾಪಂಡ ಗಣೇಶ್, ಹೊಸೂರು ಸೂರಜ್, ಪಿ.ಎಲ್.ಸುರೇಶ್, ಕಾಳೆರಮ್ಮನ ಕುಮಾರ್ ಮತ್ತಿತರರು ಇದ್ದರು.