

ಪೊನ್ನಂಪೇಟೆ: ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿ ಮೂರು ದಿನ ಕಳೆದರೂ ಹುಲಿಯ ಯಾವುದೇ ಸುಳಿವು ಪತ್ತೆಯಾಗಿಲ್ಲ.
ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸಿ, ಬಲಿ ಪಡೆಯುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಸರ್ಕಾರದಿಂದ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮಂಗಳವಾರದಿಂದಲೇ ಕಾರ್ಯಾಚರಣೆ ನಡೆಸುತ್ತಿದೆ.
ಅದರಂತೆ, ಹರಿಹರ, ಟಿ.ಶೆಟ್ಟಿಗೇರಿ ಮತ್ತು ಬೆಳ್ಳೂರು ಗ್ರಾಮದಲ್ಲಿ ಪ್ರತ್ಯೇಕವಾಗಿ ಮೂರು ಬೋನುಗಳನ್ನು ಇಡಲಾಗಿದೆ. ಟಿ.ಶೆಟ್ಟಿಗೇರಿಯಲ್ಲಿ ಇಟ್ಟಿರುವ ಬೋನಿನ ಒಳಗೆ ಹಂದಿ ಮರಿಯನ್ನು ಇರಿಸಲಾಗಿತ್ತು. ಇದರಿಂದ ಹುಲಿ ಆಕರ್ಷಣೆಗೊಂಡು ಬೋನಿಗೆ ಬೀಳುತ್ತದೆಂಬ ನಿರೀಕ್ಷೆಯಿತ್ತು. ಆದರೆ, ಅತಿಯಾದ ಚಳಿಯಿಂದಾಗಿ ಹಂದಿ ಮರಿ ಬುಧವಾರ ರಾತ್ರಿ ಬೋನಿನೊಳಗೇ ಮೃತಪಟಿದೆ.
ಅಂತೆಯೆ, ಹರಿಹರ ಮತ್ತು ಬೆಳ್ಳೂರು ಗ್ರಾಮದಲ್ಲಿ ಇಡಲಾಗಿರುವ ಬೋನುಗಳಲ್ಲಿ ಈಗಾಗಲೇ ಹುಲಿ ದಾಳಿಯಿಂದ ಮೃತಪಟ್ಟಿರುವ ಜಾನುವಾರುವಿನ ಕಳೇಬರ ಇಟ್ಟು ಹುಲಿ ಸೆರೆಗೆ ಕಾರ್ಯತಂತ್ರ ರೂಪಿಸಲಾಗಿದೆ. ಆದರೆ, ಗುರುವಾರದವರೆಗೂ ಹುಲಿಯ ಯಾವುದೇ ಸುಳಿವು ದೊರೆತಿಲ್ಲ. ಮೂರೂ ಬೋನುಗಳ ಸಮೀಪ ಹುಲಿಯ ಚಲನ-ವಲನ ಗುರುತಿಸಲು ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದೆ. ಆದರೆ, ಅಲ್ಲಿಗೆ ಹುಲಿ ಬಂದಿರುವ ಯಾವುದೇ ಕುರುಹು ಕ್ಯಾಮರಾದಲ್ಲಿ ಸೆರೆಯಾಗಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಈ ನಡುವೆ, ಹುಲಿಯ ಜಾಡು ಅರಿಯಲು ಟಿ.ಶೆಟ್ಟಿಗೇರಿ, ಬೆಳ್ಳೂರು ಮತ್ತು ಹರಿಹರ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಕೊಂಬಿಂಗ್ ನಡೆಯುತ್ತಿದೆ. ಇನ್ನೊಂದೆಡೆ, ಹುಲಿಯ ಹೆಜ್ಜೆ ಗುರುತು ಪತ್ತೆ ಹಚ್ಚಲು ತಜ್ಞರು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದುವರೆಗೂ ಹುಲಿಯ ಹೆಜ್ಜೆ ಗುರುತಾಗಲಿ ಅಥವಾ ಹುಲಿಯನ್ನು ಪ್ರತ್ಯಕ್ಷವಾಗಿ ಕಂಡಿರುವ ಬಗ್ಗೆಯಾಗಲಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಸ್ಥಳೀಯರು ಹುಲಿಯನ್ನು ಕಂಡರೆ ಕೂಡಲೇ ಅರಣ್ಯ ಇಲಾಖೆಗೆ ತಿಳಿಸುವಂತೆ ಕೋರಲಾಗಿದೆ.
ವಾರದ ಅವಧಿಯಲ್ಲಿ ಹಲವು ಜಾನುವಾರು ಬಲಿ: ಒಂದು ವಾರದ ಅವಧಿಯಲ್ಲಿ ಹುಲಿ ದಾಳಿಗೆ ಹಲವು ಜಾನುವಾರುಗಳು ಬಲಿಯಾಗಿದ್ದವು. ಹರಿಹರ ಗ್ರಾಮದ ತೀತಿರ ಮಾದಪ್ಪ ಅವರ ಹಸು ಮತ್ತು ಕರು ದಾಳಿಗೆ ತುತ್ತಾಗಿದ್ದವು. ಅದೇ ಗ್ರಾಮದ ಮುಕ್ಕಾಟೀರ ಪೆಮ್ಮಯ್ಯ ಅವರ ಹಸುವಿನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು. ಬೆಳ್ಳೂರು ಗ್ರಾಮದ ಗೋಪಾಲ್ ಅವರ ಹಸುವನ್ನು ಬಲಿ ಪಡೆದಿತ್ತು. ಟಿ.ಶೆಟ್ಟಿಗೇರಿ ಗ್ರಾಮದ ಚೆಟ್ಟಂಡ ನಟೇಶ್ ಅವರ ಹಸುವನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹುಲಿ ಸೆರೆ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ.