

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಸ್.ಆಕಾಶ್‌ರವರ ನೇತೃತ್ವದಲ್ಲಿ ಮತದಾನ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.
ತಾಲೂಕಿನ ಪೊನ್ನಂಪೇಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಿಳಾ ಒಕ್ಕೂಟದ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಸಹ ಭಾಗಿತ್ವದಲ್ಲಿ ಸ್ವೀಪ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಪೊನ್ನಂಪೇಟೆ ಸರ್ಕಾರಿ ಶಾಲಾ ಆವರಣದಿಂದ ಮುಖ್ಯ ರಸ್ತೆಯಲ್ಲಿ ಮತದಾನ ಜಾಗೃತಿ ಜಾಥಾ ಜರುಗಿತು. ಬಳಿಕ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನದ ಮಹತ್ವ ಸಾರುವ ಘೋಷಣೆಗಳನ್ನು ಕೂಗಲಾಯಿತು.
ಇದರೊಂದಿಗೆ ಮತದಾನದ ಕುರಿತು ಮಹಿಳೆಯರಿಗೆ ಎರಡು ವಿಭಾಗಗಳಲ್ಲಿ ರಂಗೋಲಿ ಸ್ಫರ್ಧೆಯನ್ನು ಆಯೋಜಿಸಲಾಗಿತ್ತು. ೧೮ ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ೧೮ ವರ್ಷದೊಳಗಿನ ಮಕ್ಕಳು ಸದರಿ ಸ್ಫರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ರಂಗೋಲಿಯ ಮೂಲಕ ಮತದಾನದ ಮಹತ್ವ ಮತ್ತು ಶ್ರೇಷ್ಟತೆಯನ್ನು ಸಾರಲಾಯಿತು.
ಬಳಿಕ ಎರಡು ವಿಭಾಗಗಳಲ್ಲಿ ಮತದಾನದ ಕುರಿತು ಅತ್ಯುತ್ತುಮ ಸಂದೇಶವನ್ನು ಸಾರಿದ ರಂಗೋಲಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಯಿತು. ಮತದಾನದ ಶ್ರೇಷ್ಠತೆ ಬಗ್ಗೆ ಬಣ್ಣದ ಮೂಲಕ ಸಾರಿದ ಎಲ್ಲಾ ಮಹಿಳೆಯರಿಗೂ ಪ್ರಶಂಸನಾ ಪತ್ರ ವಿತರಿಸಲಾಯಿತು.