ಗೋಣಿಕೊಪ್ಪ: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ.
ಪೊನ್ನಂಪೇಟೆ ಗ್ರಾಮ ಪಂಚಾಯಿತಿಅನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿಸುವಂತೆ ಕೊಡಗು ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು.
ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಅವರ ಶಿಫಾರಿಸ್ಸಿನ ಮೇರೆಗೆ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಹಿಂದೆ ಕೆ.ಜಿ.ಬೋಪಯ್ಯ ಅವರು ಶಾಸಕರಾಗಿರುವಾಗ ಪಟ್ಟಣ ಪಂಚಾಯತಿಯಾಗಿ ಪರಿವರ್ತಿಸಲು ಆಸಕ್ತಿ ತೋರಿ ಪ್ರಸ್ತಾವನೆ ಸಲ್ಲಿಸಿದರು. ಸರ್ಕಾರ ಬದಲಾದ ಮೇಲೆ ಆರ್ಥಿಕ ಇಲಾಖೆಯಿಂದ ಅನುಮೋದನೆ ರದ್ದಾಗಿತ್ತು. ನಂತರ ಗೋಣಿಕೊಪ್ಪಲು ಪೊನ್ನಂಪೇಟೆ ಹಾಗೂ ಅರ್ವತೋಕ್ಲು ಪಂಚಾಯಿತಿಗಳು ಒಟ್ಟಿಗೆ ಸೇರಿ ಪುರಸಭೆಯಾಗಿ ಪರಿವರ್ತಿಸಲು ಮೂರು ಪಂಚಾಯಿತಿಗಳಿಂದ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಇದೀಗ ಸಚಿವ ಸಂಪುಟ ಪುರಸಭೆ ಬದಲು ಪೊನ್ನಂಪೇಟೆಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಿಸಿದೆ.