

ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನಲ್ಲಿರುವ ಅರಣ್ಯ ಮಹಾವಿದ್ಯಾಲಯ ಅನೇಕ ವಿದ್ಯಾರ್ಥಿಗಳ ಜೀವನ ರೂಪಿಸಿದೆ. ಕರ್ನಾಟಕದಲ್ಲಿರುವ ಎರಡು ಅರಣ್ಯ ಮಹಾವಿದ್ಯಾಲಯದಲ್ಲಿ ಇದು ಕೂಡ ಒಂದು. 1995 ಸ್ಥಾಪನೆಯಾದ ಕಾಲೇಜು ಇಲ್ಲಿವರೆಗೂ ಹಲವಾರು ಅರಣ್ಯ ಸಂರಕ್ಷಕರನ್ನು ಕೊಡುಗೆಯಾಗಿ ಕೊಟ್ಟಿದೆ. 2013ರಲ್ಲಿ ಬೆಂಗಳೂರು ಜಿಕೆವಿಕೆಯಡಿ ಇದ್ದ ಕಾಲೇಜು, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಗೆ ವಿಶ್ವವಿದ್ಯಾಲಯದಡಿಗೆ ಬಂದಿತ್ತು. ಇದೀಗ 2025ರ ಏಪ್ರಿಲ್‌ನಿಂದ ಮಂಡ್ಯದ ಕೃಷಿ ವಿಶ್ವವಿದ್ಯಾಲಯದಡಿ ಕಾಲೇಜನ್ನು ತರಲಾಗಿದೆ.
ಬೆಂಗಳೂರಿನಿಂದ ಬೇರ್ಪಟ್ಟು ಶಿವಮೊಗ್ಗಕ್ಕೆ ಬಂದ ಮೇಲೆ ಉತ್ತಮ ಸಾಧನೆಯನ್ನು ಕಾಲೇಜು ಮಾಡಿತ್ತು. ಇದೀಗ ಹೊಸ ಆಶಾಭಾವೆನಯೊಂದಿಗೆ ಹೊಸ ವಿಶ್ವವಿದ್ಯಾಲಯಕ್ಕೆ ಸೇರ್ಪಡೆ ಆಗುತ್ತಿದೆ. ಏಪ್ರಿಲ್ ತಿಂಗಳಿನಿಂದ ನೂತನ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಕಾರ್ಯ ಆರಂಭವಾಗಿದ್ದು, ಈ ಶೈಕ್ಷಣಿಕ ವರ್ಷದಿಂದ ಅಧಿಕೃತವಾಗಿ ಚಾಲನೆ ದೊರೆತಿದೆ. ಪ್ರಸ್ತುತ ಸರ್ಕಾರದ ವಿಶೇಷ ಅಧಿಕಾರಿಯಾಗಿ ಡಾ. ಕೆ.ಎಂ.ಹರಿಣಿ ಕುಮಾರ್ ಅವರನ್ನು ನೇಮಕ ಮಾಡಿದೆ. ಅವರ ತಂಡ ಕಾರ್ಯಪ್ರವೃತ್ತವಾಗಿದೆ.
ನೂತನವಾಗಿ ಪ್ರಾರಂಭವಾದ ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಮಂಡ್ಯ, ಕೊಡಗು, ಚಾಮರಾಜನಗರ, ಮೈಸೂರು ಮತ್ತು ಹಾಸನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಕಾಲೇಜು, ಕೃಷಿ ಕಾಲೇಜು, ಪಶುವೈದ್ಯಕೀಯ ಕಾಲೇಜು, ತೋಟಗಾರಿಗೆ ಕಾಲೇಜನ್ನು ಸೇರ್ಪಡೆಗೊಳಿಸಲಾಗಿದೆ.
ಕೊಡಗಿನಲ್ಲಿ ಇರುವ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ಮಡಿಕೇರಿಯ ವಿಸ್ತರಣಾ ಘಟಕ ಮಂಡ್ಯ ಕೃಷಿ ವಿಶ್ವವಿದ್ಯಾಲಯದಡಿ ಬರಲಿದೆ.
ಅನುಕೂಲ: ಮೊದಲು ಯಾವುದೇ ಸಭೆಗೂ, ಕಾರ್ಯಕ್ರಮಕ್ಕೂ ಶಿವಮೊಗ್ಗಕ್ಕೆ ಹೋಗಬೇಕಿತ್ತು. ಈಗ ಪ್ರಯಾಣದ ದೂರ ಕಡಿಮೆ ಆಗಿದೆ. ಆಡಳಿತಾತ್ಮಕ ಕಚೇರಿ ಹತ್ತಿರ ಆದ ಕಾರಣ ಸಂಪರ್ಕಿಸುವುದೂ ಸುಲಭವಾಗಿದೆ.
ನೂತನ ವಿಶ್ವವಿದ್ಯಾಲಯ ಆಗುತ್ತಿರುವುದರಿಂದ ಇನ್‌ಫ್ರಾಸ್ಟ್ರಕ್ಚರ್‌ಗೂ ಅನುಕೂಲ ಆಗಲಿದೆ. ಮಂಡ್ಯ ಮತ್ತು ಕೊಡಗಿನಲ್ಲಿ ಕೃಷಿ ಸಾಮ್ಯತೆ ಇದ್ದು, ಹೊಸ ಸಂಶೋಧನೆಗಳು ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ಈ ಹಿಂದೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಗೆ ವಿಶ್ವ ವಿದ್ಯಾಲಯದಡಿ ಇದ್ದಾಗಲೂ ಕೊಡಗಿಗೆ ಉತ್ತಮ ಪ್ರೋತ್ಸಾಹ ಇತ್ತು. ಇನ್ನು ಮುಂದೆ ಮಂಡ್ಯದಿಂದಲೂ ಅದೇ ಪ್ರೋತ್ಸಾಹದ ನಿರೀಕ್ಷೆಯಲ್ಲಿ ಇದ್ದೇವೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.
ಆದರೆ ಕೆಲ ಸಿಬ್ಬಂದಿಗೆ ಈ ವರ್ಗಾವಣೆಯಿಂದ ಕಷ್ಟವಾಗುತ್ತಿದ್ದು. ಕೆಲವರು ಶಿವಮೊಗ್ಗ ವಿಶ್ವವಿದ್ಯಾಲಯದಡಿ ಇರುವ ಕಾಲೇಜುಗಳಿಗೆ ವರ್ಗಾವಣೆ ಬಯಸುತ್ತಿದ್ದಾರೆ. ಒಟ್ಟಿನಲ್ಲಿ ನೂತನವಾಗಿ ಆರಂಭವಾದ ಮಂಡ್ಯ ಕೃಷಿ ವಿಶ್ವವಿದ್ಯಾಲಯದಡಿ ಕೊಡಗಿನ ಅರಣ್ಯ ಮಹಾವಿದ್ಯಾಲಯ ಇನ್ನಷ್ಟು ಸಾಧನೆ ಮಾಡಲಿ ಎನ್ನುವುದೇ ಎಲ್ಲರ ಆಶಯವಾಗಿದೆ.
ಮೊದಲು ಪೊನ್ನಂಪೇಟೆ ಕಾಲೇಜು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದಡಿ ಇತ್ತು. ಇದೀಗ ಮಂಡ್ಯಕ್ಕೆ ವರ್ಗಾವಣೆ ಆಗಿದೆ. ಮೊದಲು ನಮಗೆ ಒಳ್ಳೆಯ ಉತ್ತೇಜನ ನೀಡುತ್ತಿದ್ದರು. ಈಗಲೂ ಅದೇ ಆಶಾಭಾವನೆಯಲ್ಲಿ ಇದ್ದೇವೆ. ಮಂಡ್ಯ ಕೊಡಗಿಗೆ ಹತ್ತಿರ ಆಗಿರುವ ಕಾರಣ ಸಂಪನ್ಮೂಲ ವ್ಯಕ್ತಿಗಳು, ಅಧಿಕಾರಿಗಳು ಬಂದು ಹೋಗುವುದಕ್ಕೂ ಸುಲಭ ಆಗಲಿದೆ. ಹೊಸ ಕೃಷಿ ಸಂಶೋಧನೆಗಳು, ಯೋಜನೆ ಆಗಬಹುದು ಎನ್ನುವ ನಿರೀಕ್ಷೆ ಇದೆ. ಡಾ.ಆರ್.ಎನ್.ಕೆಂಚಾರೆಡ್ಡಿ ಪ್ರಾಧ್ಯಾಪಕರು, ಕೀಟಶಾಸ್ತ್ರ ವಿಭಾಗ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಮೊದಲು ಶಿವಮೊಗ್ಗದಲ್ಲಿ ಇದ್ದಾಗ ಅದು ಜೋನ್ 9 ಆಗಿತ್ತು. ಆಗ ನಮಗೆ ಕೃಷಿ ಅರಣ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಆಗುತ್ತ ಇರಲಿಲ್ಲ. ಈಗ ಜೋನ್ 4,5,6 ಮತ್ತು 7ಕ್ಕೆ ಒಳಪಡುವ ಕಾರಣ ಕೃಷಿ ಅರಣ್ಯ ಕ್ಷೇತ್ರದಲ್ಲಿ ಅಪಾರ ಅವಕಾಶಗಳು ತೆರೆದುಕೊಳ್ಳುತ್ತವೆ. ಸಂಶೋಧನೆಗಳು ಹೆಚ್ಚಾಗುತ್ತವೆ. ಆಗ್ರೋ ಫಾರೆಸ್ಟ್ರಿ ರಿಸರ್ಚ್ ಸೆಂಟರ್ ತೆರೆಯುವ ಯೋಚನೆ ಇದೆ. ಇದರಿಂದ ಕೊಡಗಿನಲ್ಲಿ ಕೃಷಿ ಅರಣ್ಯದ ಅವಕಾಶ ಹೆಚ್ಚಲಿದೆ. ಡಾ.ಜಿ.ಎಂ.ದೇವಗಿರಿ ಡೀನ್, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ