

ಸಂದೀಪ್ ಸಾಲ್ಯಾನ್ ಬಂಟ್ವಾಳ
ರಸ್ತೆಗಳು ಅಭಿವೃದ್ಧಿಯಾದರೆ ಊರು ಅಭಿವೃದ್ಧಿಯಾಗುತ್ತದೆ ಎಂದು ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಗ್ರಾಮದಲ್ಲಿರುವ ಪೊನ್ನಂಗಿಲ ಗ್ರಾಮದ ರೈತರು ತಮ್ಮ ಸ್ವಂತ ಜಾಗ ನೀಡಿ ರಸ್ತೆ ನಿರ್ಮಿಸಲು ಕಾರಣರಾಗಿದ್ದರು. ಈಗ ಆ ರಸ್ತೆಯಲ್ಲಿ ಡಾಂಬರ್‌ಗಿಂತ ಪ್ಯಾಚ್‌ವರ್ಕ್, ಹೊಂಡಗಳೇ ತುಂಬಿದ್ದು, ವಾಹನ ಸಂಚಾರ ದುಸ್ತರವಾಗಿದೆ.
ಕೆಳಗಿನ ಪೊನ್ನಂಗಿಲ ಮತ್ತು ಮೇಲಿನ ಪೊನ್ನಂಗಿಲದ ಎಲ್ಲ ರೈತರು, ತಮ್ಮೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕಾಗಿ ಜಮೀನು ದಾನ ಮಾಡಿದ ಪರಿಣಾಮ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿತ್ತು. ಬಂಟ್ವಾಳ ಎಸ್‌ವಿಎಸ್ ಕಾಲೇಜಿನಿಂದ ಅಗ್ರಾರ್ ಚರ್ಚ್‌ವರೆಗೆ ಈ ರಸ್ತೆ ಇದ್ದು ಸುಮಾರು 1.9 ಕಿ.ಮೀ. ಉದ್ದ ಇದೆ. ಈ ರಸ್ತೆ ವಾಮದಪದವು, ದರ್ಬೆ, ಕರೆಂಕಿ, ಆಚಾರಿಪಲ್ಕೆ, ನೇರಂಬೋಳು ಮುಂತಾದ ಊರುಗಳಿಗೆ ಸುಲಭ ಹಾಗೂ ಹತ್ತಿರದ ರಸ್ತೆಯಾಗಿದೆ. ಆದರೆ ಈಗ ರಸ್ತೆಯುದ್ದಕ್ಕೂ ಹೊಂಡಗಳು ಕಾಣಿಸಿ ವಾಹನ ಸವಾರರು ಸಂಚರಿಸಲು ಪರದಾಡಬೇಕಾಗಿದೆ.
ಮೇಲ್ನೋಟಕ್ಕೆ ರಸ್ತೆಯಂತೆ ಕಂಡರೂ ಡಾಂಬರು ಕರಗಿ ಲವಲೇಶವೂ ಕಾಣಿಸುತ್ತಿಲ್ಲ. ಸಾರ್ವಜನಿಕರು ಹೊಂಡಗಳಿಗೆ ದೊಡ್ಡ ಕಲ್ಲುಗಳನ್ನು ತುಂಬಿಸಿ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ಈ ರಸ್ತೆಯನ್ನೇ ಅವಲಂಬಿಸಿರುವ ಗ್ರಾಮಸ್ಥರು ನಿತ್ಯ ಕಷ್ಟ ಅನುಭವಿಸುತ್ತಾ ಇದ್ದಾರೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಈ ರಸ್ತೆ ನಿರ್ವಹಣೆ ಇಲ್ಲದೆ ಹದಗೆಟ್ಟಿದೆ. ಈ ರಸ್ತೆಯ ಮೂಲಕ ದರ್ಬೆ, ನೇರಂಬೋಳು, ವಾಮದಪದವು, ಅಗ್ರಾರ್‌ಗೆ ಹೋಗಲು ಹತ್ತಿರದ ದಾರಿ. ರಸ್ತೆಯನ್ನು ದುರಸ್ತಿ ಪಡಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಮನೋಹರ್ ನೇರಂಬೋಳು, ಸ್ಥಳೀಯರು ಈ ವರ್ಷದ ನಿರಂತರ ಮಳೆಯಿಂದಾಗಿ ರಸ್ತೆಯಲ್ಲೇ ನೀರು ಹರಿದು ಹದಗೆಟ್ಟಿದೆ. ಸರ್ಕಾರದ ಅನುದಾನದಡಿ ರಸ್ತೆ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು. ವಾಸು ಪೂಜಾರಿ, ಬಂಟ್ವಾಳ ಪುರಸಭೆ ಅಧ್ಯಕ್ಷ