

ನಾಪೋಕ್ಲು: ಪೊನ್ನಾಡ್ ರೈತ ಉತ್ಪಾದಕ ಕಂಪನಿ ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದು, ಸದಸ್ಯರ ಸಹಕಾರದಿಂದ ಅಭಿವೃದ್ಧಿ ಹೊಂದಿದೆ ಎಂದು ಪೊನ್ನಾಡ್ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ಹೇಳಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಮಂಗಳವಾರ ಆಯೋಜಿಸಿದ್ದ ಕಂಪನಿಯ ನಾಲ್ಕನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಕಂಪನಿ 13 ಲಕ್ಷ ರೂ. ಬಂಡವಾಳದಿಂದ ಆರಂಭಗೊಂಡು ಇದೀಗ 10 ಕೋಟಿ ರೂ.ಗಳ ವ್ಯವಹಾರ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಕಂಪನಿ ಬೆಳವಣಿಗೆಗೆ ನಬಾರ್ಡ್ ಸಹಕಾರ ನೀಡಿದೆ. ರೈತರಿಗೆ ಅಗತ್ಯವಿರುವ, ಕೃಷಿಗೆ ಪೂರಕವಾದ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದರು.
ಸಂಸ್ಥೆಯ ವಹಿವಾಟು ಪಾರದರ್ಶಕವಾಗಿದೆ. ವಹಿವಾಟಿನ ಷೇರು ಬೆಲೆ 96 ರೂ. ಇದ್ದು, ಕಳೆದ ವರ್ಷ ನೂರು ರೂ. ಇದ್ದ ಷೇರು ಬೆಲೆ ಇಂದು 134 ರೂ. ಆಗಿದೆ. ರೈತರಿಗೆ ಕಾಫಿ ಖರೀದಿಯಲ್ಲಿ ಯೋಗ್ಯ ಬೆಲೆ ನೀಡಲಾಗುತ್ತಿದೆ ಎಂದರು.
ಕಂಪನಿ ಆಶ್ರಯದಲ್ಲಿ ಪೊನ್ನಾಡು ಸೂಪರ್ ಮಾರ್ಕೆಟ್ ತೆರೆಯಲಾಗಿದೆ. ರೈತರಿಗೆ ಗುಣಮಟ್ಟದ ದಿನಸಿ ವಸ್ತುಗಳನ್ನು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಕುರಿತು ಮಡಿಕೇರಿ ಕಾಫಿ ಮಂಡಳಿಯ ವಿಸ್ತರಣಾ ಕಚೇರಿಯ ಉಪನಿರ್ದೇಶಕ ಚಂದ್ರಶೇಖರ್, ಕೃಷಿ ತಜ್ಞ ಡಾ.ನಡಫ್, ರಾಜ್ಯ ಸಮನ್ವಯ ಅಧಿಕಾರಿ ರಾಮಪ್ರಿಯ, ಜಿಲ್ಲಾ ಸಮನ್ವಯಾಧಿಕಾರಿ ಪವಿತ್ರಾ. ನಬಾರ್ಡ್ ಡಿಡಿಎಂ ರಮೇಶ್‌ಬಾಬು, ಈಶ ಔಟ್‌ರೀಚ್‌ನ ಸುಸರ್ಪಿಣಿ, ದೇವಬಾಹು ಸುವಿರಾಜ ಮಾತನಾಡಿದರು.
ವೇದಿಕೆಯಲ್ಲಿ ಕಂಪನಿ ನಿದೇಶಕರಾದ ಕುಲ್ಲೇಟಿರ ಅಜಿತ್ ನಾಣಯ್ಯ, ಮುಕ್ಕಾಟಿರ ವಿನಯ್, ಕೋಡಿರ ಪ್ರಸನ್ನ, ಕಾಟುಮಣಿಯಂಡ ಉಮೇಶ್, ಕೇಟೋಳಿರ ರತ್ನಾ ಚರ್ಮಣ್ಣ, ಸಹ ನಿರ್ದೇಶಕರಾದ ಕಲ್ಯಾಟಂಡ ರಘು ತಮ್ಮಯ್ಯ, ಅಪ್ಪನೆರವಂಡ ರಾಜಾ ಪೂವಯ್ಯ, ಮಚ್ಚುರ ಯದುಕುಮಾರ್, ಕುಲ್ಲೇಟಿರ ಬನ್ಸಿ ಬೋಪಣ್ಣ ಇತರರಿದ್ದರು.