

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಚಲನಚಿತ್ರ ಮೂಲಕ ಕೊಡಗಿನ ಶ್ರೀಮಂತ ಪರಿಸರ, ಕಲೆ ಮತ್ತು ಸಂಸ್ಕೃತಿ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದರು.
ಮಡಿಕೇರಿ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಕೊಡವ ಮಕ್ಕಡ ಕೂಟ ಅರ್ಪಿಸುವ ಸ್ವಸ್ತಿಕ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಿಸಿ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನ ಮಾಡಿರುವ ಪೊಮ್ಮಾಲೆ ಕೊಡಗ್ ಕೊಡವ ಚಲನಚಿತ್ರ ವಿಶೇಷ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕೊಡವ ಸಂಸ್ಕೃತಿ ಅನಾವರಣಗೊಳ್ಳುತ್ತಿದೆ. ಮಂದ್, ದೇವಾಲಯ ಮತ್ತಿತರ ಕಡೆಗಳಲ್ಲಿ ಕಲೆಯ ಪ್ರದರ್ಶನ ವಾಗುತ್ತಿದೆ. ನಮ್ಮ ಸಂಸ್ಕೃತಿಯು ಇತಿಹಾಸ ಪುಸ್ತಕದ ರೂಪದಲ್ಲಿ ದಾಖಲಾಗಿದ್ದರೂ ಇಂದು ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸಿದೆ. ತಾಂತ್ರಿಕ ಲೋಕ ಪ್ರಗತಿ ಸಾಧಿಸಿರುವುದರಿಂದ ಸಂಸ್ಕೃತಿಯ ಬೆಳವಣಿಗೆಗೆ ಸಿನಿಮಾಗಳ ಅವಶ್ಯಕತೆ ಇದೆ ಎಂದರು.
ಕೊಡವ ಭಾಷೆಯಲ್ಲಿ ಹಲವು ಚಿತ್ರ ತೆರೆ ಕಾಣುತ್ತಿರುವುದು ಸಂತೋಷದ ವಿಚಾರ. ಮತ್ತಷ್ಟು ದೊಡ್ಡ ಮಟ್ಟದ ಚಿತ್ರಗಳು ನಿರ್ಮಾಣಗೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗಳಿಸಲಿ ಎಂದು ರವಿ ಕಾಳಪ್ಪ ಹಾರೈಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡವ ಚಲನಚಿತ್ರವನ್ನು ಅಭಿಮಾನದಿಂದ ನೋಡಿ ಚಿತ್ರ ತಂಡವನ್ನು ಪ್ರೋತ್ಸಾಸಬೇಕು. ಪಾಲಕರು ಕೊಡವ ಭಾಷೆ ಮತ್ತು ಕೊಡವ ಸಿನಿಮಾದ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸಬೇಕು ಮತ್ತು ಚಿತ್ರ ವೀಕ್ಷಿಸಲು ಪ್ರೇರಣೆ ನೀಡಬೇಕೆಂದು ಕರೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನೀಲ್ ಸುಬ್ರಮಣಿ ಮಾತನಾಡಿ, ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಯಾರೂ ಅರ್ಜಿ ಹಾಕುವುದಿಲ್ಲ, ಹುಟ್ಟಿದ ಜಾತಿ ಮತ್ತು ಆಡುವ ಭಾಷೆಯ ಮೇಲೆ ಅಭಿಮಾನ ಇರಬೇಕು ಎಂದರು. ಆರ್ಥಿಕ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಕೊಡವ ಸಿನಿಮಾಗಳು ತೆರೆ ಕಾಣುತ್ತಿರುವುದು ಸಂತೋಷದ ವಿಚಾರ ಎಂದರು.
ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಆಚಾರ, ವಿಚಾರ, ಸಂಸ್ಕೃತಿ ಉಳಿದಾಗ ಮಾತ್ರ ಒಂದು ಜನಾಂಗ ಉಳಿಯಲು ಸಾಧ್ಯವೆಂದರು. ಕಲೆ, ಸಂಸ್ಕೃತಿ ಬಗ್ಗೆ ಪುಸ್ತಕ ರಚಿಸಿದರೂ ಓದುವವರಿಲ್ಲ, ಮಕ್ಕಳಲ್ಲಿ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಕೆಲಸ ಪಾಲಕರು ಮಾಡಬೇಕೆಂದರು.
ಹಿರಿಯ ಸಾತಿ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಕೊಡವರ ಶಕ್ತಿ ಮತ್ತು ಚೈತನ್ಯ ಎಂದಿಗೂ ಕಡಿಮೆಯಾಗುವುದಿಲ್ಲ. ಭಾಷೆ ಹಾಗೂ ಸಂಸ್ಕೃತಿ ಎರಡು ಚಕ್ರಗಳಿದ್ದಂತೆ, ಕೊಡವಾಮೆಯನ್ನು ಎಲ್ಲರೂ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.
ಪೊಮ್ಮಾಲೆ ಕೊಡಗ್ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧಾ ಪ್ರಕಾಶ್ ಮಾತನಾಡಿ, ಇದು ಕೇವಲ ಕೊಡವರ ಚಿತ್ರವಲ್ಲ, ಕೊಡಗಿನ ಚಿತ್ರ ವೆಂದು ಭಾವಿಸಿ ಪ್ರತಿಯೊಬ್ಬರು ಚಿತ್ರ ವೀಕ್ಷಿಸುವ ಮೂಲಕ ಪ್ರೋತ್ಸಾಸಬೇಕೆಂದು ಮನವಿ ಮಾಡಿದರು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಪೊಮ್ಮಾಲೆ ಕೊಡಗ್ ಚಿತ್ರ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಏಷಿಯನ್ ಚಿತ್ರಗಳೊಂದಿಗೆ ಸ್ಪರ್ಧೆ ನೀಡುತ್ತಿರುವುದು ಹೆಮ್ಮೆಯ ವಿಚಾರವೆಂದರು. ನಾಡ ಪೆದ ಆಶಾ ಚಲನಚಿತ್ರದ ನಿರ್ದೇಶನಕ್ಕೆ ತಮಗೆ ಹಾಗೂ ರಂಗಪ್ರವೇಶ ಕನ್ನಡ ಚಿತ್ರದ ನಿರ್ದೇಶನಕ್ಕೆ ಪತ್ನಿ ಯಶೋಧ ಅವರಿಗೆ ಪ್ರಶಸ್ತಿ ದೊರೆತ್ತಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿದರು.
ಮಹಾವೀರಚಕ್ರ ಪುರಸ್ಕೃತ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಗಣಪತಿ, ಸಾಹಿತಿ ಡಾ.ಕುಶ್ವಂತ್ ಕೋಳಿಬೈಲು, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿದರು. ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಕೆ೩ ಪಿಕ್ಚರ್ಸ್‌ನ ಈರಮಂಡ ಜಯ್, ಈರಮಂಡ ಹರಿಣಿ ವಿಜಯ್ ಮತ್ತಿತರರು ಇದ್ದರು.