ಏಷ್ಯನ್ ನೆಟ್ ಪ್ಯಾಕ್ ಅವಾರ್ಡ್ ಸ್ಪರ್ಧೆಗೆ "ಪೊಮ್ಮಾಲೆ ಕೊಡಗ್" ಆಯ್ಕೆ

MDK05
Published on

ಮಡಿಕೇರಿ: ಇದೇ ಪ್ರಥಮ ಬಾರಿಗೆ ಪ್ರಶಸ್ತಿ ವಿಜೇತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ "ಪೊಮ್ಮಾಲೆ ಕೊಡಗ್" ಕೊಡವ ಸಿನಿಮಾ ೨೮ನೇ ಕೊಲ್ಕತ್ತ ಇಂಟರ್ ನ್ಯಾಷನಲ್ ಫಿಲಂ ಪೆಸ್ಟಿವಲ್‌ನಲ್ಲಿ ಏಷ್ಯನ್ ನೆಟ್ ಪ್ಯಾಕ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದೆ.


ಪಿಐಎಪಿಎಫ್ ಮಾನ್ಯತೆ ಪಡೆದ ಭಾರತದ ಐದು ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಈ ಚಿತ್ರೋತ್ಸವ ವರ್ಲ್ಡ್ ಪ್ರಿಮಿಯರ್ ಫೆಸ್ಟಿವಲ್ ಆಗಿದೆ. ಎಂಟು ದೇಶಗಳ ಸಿನಿಮಾಗಳು ಸ್ಪರ್ಧೆಯಲ್ಲಿದ್ದು, ೯೦೦ ಕ್ಕೂ ಹೆಚ್ಚು ಚಿತ್ರಗಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿದ್ದವು. ಇವುಗಳಲ್ಲಿ ಸಾಕ್ಷ್ಯಚಿತ್ರ, ಕಿರುಚಿತ್ರ, ಫ್ಯೂಚರ್ ಪಿಲ್ಮಗಳು ಸೇರಿದಂತೆ ಒಟ್ಟು ೧೮೩ ಚಿತ್ರಗಳು ಮಾತ್ರ ಆಯ್ಕೆಯಾದವು. ಕರ್ನಾಟಕದಿಂದ ಕನ್ನಡ, ತುಳು, ಕೊಡವ, ಬ್ಯಾರಿ ಸೇರಿ ನಾಲ್ಕು ಸಿನಿಮಾಗಳು ಆಯ್ಕೆಯಾಗಿವೆ.


ಕೊಡವ ಸಿನಿಮಾಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೆಗ್ಗಳಿಕೆಯ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹಾಗೂ ನಿರ್ಮಾಪಕಿ ಯಶೋಧ ಪ್ರಕಾಶ್ ದಂಪತಿ "ಪೊಮ್ಮಾಲೆ ಕೊಡಗ್" ಮೂಲಕ ಕೊಲ್ಕತ್ತ ಇಂಟರ್ ನ್ಯಾಷನಲ್ ಫಿಲಂ ಪೆಸ್ಟಿವಲ್‌ನ ಏಷ್ಯನ್ ನೆಟ್ ಪ್ಯಾಕ್ ಅವಾರ್ಡ್‌ನ ಹೊಸ್ತಿಲಲ್ಲಿ ಇದ್ದಾರೆ. ಕೊಟ್ಟುಕತ್ತೀರ ಪ್ರಕಾಶ್ ಹಾಗೂ ಯಶೋಧ ದಂಪತಿ ನಿರ್ಮಿಸಿ, ನಿರ್ದೇಶಿಸಿದ ನಾಲ್ಕು ಕೊಡವ ಚಿತ್ರಗಳು ವಿವಿಧ ರಾಜ್ಯಗಳಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸಗಳಿಗೆ ಆಯ್ಕೆಯಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮುಂಬರುವ ದಿನಗಳಲ್ಲೂ ಇವರು ಕೊಡವ ಭಾಷೆಯ ಸಿನಿಮಾವನ್ನು ಮಾಡಿ ಇತರ ದೇಶಗಳಲ್ಲಿ ಪ್ರದರ್ಶಿಸುವ ಅಭಿಲಾಷೆಯನ್ನು ಹೊಂದಿದ್ದಾರೆ.


ಪೊಮ್ಮಾಲೆ ಕೊಡಗ್ ಚಿತ್ರ ಏಷ್ಯನ್ ನೆಟ್ ಪ್ಯಾಕ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ದಂಪತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಸಿನಿಪ್ರಿಯರಿಗೆ ಅರ್ಪಿಸುವ ಮೂಲಕ ಕೊಡಗಿನ ಹಿರಿಮೆಯನ್ನು ಹೆಚ್ಚಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net