ದ್ರಾಕ್ಷಿಯಿಂದ ದಾಳಿಂಬೆಯೆಡೆಗೆ ರೈತರ ಹೆಜ್ಜೆ

dalimbe
1.ದೇವನಹಳ್ಳಿಯ ದಾಳಿಂಬೆ ತೋಟದಲ್ಲಿ ತೋಟಗಾರಿಕೆ ಉಪನಿರ್ದೇಶಕ ಗುಣವಂತ ಹಾಗೂ ಸಿಬ್ಬಂದಿ ತೋಟವನ್ನು ವೀಕ್ಷಣೆ ಮಾಡುತ್ತಿರುವುದು.
Published on

235.92 ಹೆಕ್ಟೇರ್ ಹೆಚ್ಚಳ

ಜಿಲ್ಲೆಯಲ್ಲಿ ಲಾಭದಾಯಕ ಬೆಳೆ

ಹೊರ ರಾಜ್ಯಗಳಿಂದಲೂ ಬೇಡಿಕೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದ್ರಾಕ್ಷಿ ಬೆಳೆಗಾರರು ಮೆಲ್ಲನೆ ದಾಳಿಂಬೆ ಬೆಳೆಯತ್ತ ಮುಖ ಮಾಡುತ್ತಿದ್ದಾರೆ, ವಿಪರೀತ ನಿರ್ವಹಣೆ ವೆಚ್ಚ, ಬೇಡಿಕೆಯಲ್ಲಿ ಏರುಪೇರು ಮತ್ತಿತರ ಕಾರಣಗಳಿಂದ ಕೈ ಸುಟ್ಟುಕೊಳ್ಳುತ್ತಿರುವ ದ್ರಾಕ್ಷಿ ಬೆಳೆಗಾರರು ನಿರ್ವಹಣೆ ಸುಲಭ ಹಾಗೂ ಹೆಚ್ಚಿನ ಲಾಭ ತರುವ ದಾಳಿಂಬೆ ಬೆಳೆಯೆಡೆ ಆಸಕ್ತಿ ತೋರಿದ್ದು ಜಿಲ್ಲೆಯಲ್ಲಿ ಇತ್ತೀಚಿಗೆ ದಿನಗಳಲ್ಲಿ ದಾಳಿಂಬೆ ಬೆಳೆ ಪ್ರವರ್ಧಮಾನಕ್ಕೆ ಬರುತ್ತಿದೆ.
ರಾಗಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ದಶಕಗಳಿಂದೀಚೆಗೆ ತೋಟಗಾರಿಕೆ ಬೆಳೆಗಳು ಮುಂಚೂಣಿಗೆ ಬರುತ್ತಿವೆ. ಮಳೆಯಾಶ್ರಿತ ಕೃಷಿ ಚಟುವಟಿಕೆಯೊಂದಿಗೆ ಕೊಳವೆಬಾವಿಗಳ ಆಸರೆಯಲ್ಲಿ ತೋಟಗಾರಿಕೆ ಕೃಷಿಯೂ ನಡೆಯುತ್ತಿದೆ. ಸರ್ಕಾರ ಕೃಷಿಹೊಂಡ ಯೋಜನೆ, ತುಂತುರು ನೀರಾವರಿ ಹಾಗೂ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಸಹಾಯಧನ ಮತ್ತಿತರ ಯೋಜನೆಗಳಿಂದಾಗಿ ಜಿಲ್ಲೆಯ ರೈತಾಪಿ ಜನರು ತೋಟಗಾರಿಕೆಯೆಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತಿಚಿನ ವರ್ಷಗಳಲ್ಲಿ ಲಾಭದಾಯಕ ಬೆಳೆಯಾಗಿ ಗುರುತಿಸಿಕೊಂಡಿರು ದಾಳಿಂಬೆಯೆಡೆಗೆ ರೈತರು ಆಸಕ್ತಿ ತೋರಿಸುತ್ತಿದ್ದು ದಾಳಿಂಬೆ ಪ್ರಧಾನ ತೋಟಗಾರಿಕೆ ಬೆಳೆಯಾಗುವತ್ತ ಹೆಜ್ಜೆ ಹಾಕುತ್ತಿದೆ.
ದ್ರಾಕ್ಷಿ ಬದಲಿಗೆ ದಾಳಿಂಬೆ: ದಶಕಗಳ ಹಿಂದೆ ನೀಲಗಿರಿಮಯವಾಗಿದ್ದ ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಅರಿವು ಕಾರ್ಯಕ್ರಮ ರೈತರಲ್ಲಿ ಜಾಗೃತಿ ಸೇರಿ ಇನ್ನಿತರ ಕಾರಣಗಳಿಂದಾಗಿ ನೀಲಗಿರಿ ತೋಪುಗಳು ತೋಟಗಳಾಗಿ ಪರಿವರ್ತನೆಯಾಗಿವೆ. ಮೊದಲಿಗೆ ದ್ರಾಕ್ಷಿ ಬೆಳೆಗೆ ಒತ್ತು ನೀಡಿದ್ದ ಜಿಲ್ಲೆಯ ರೈತರು ಹೆಚ್ಚಾಗಿ ದ್ರಾಕ್ಷಿ ತೋಟಗಳನ್ನು ಮಾಡಿದ್ದಾರೆ. ಆದರೆ ದ್ರಾಕ್ಷಿ ಬೆಳೆಯ ದರ ಜೂಜಾಟದಂತಾಗಿ ನಿರೀಕ್ಷಿತ ಲಾಭವಿಲ್ಲದೆ ಬಹುತೇಕ ಸಮಯದಲ್ಲಿ ರೈತರು ಕೈಸುಟ್ಟಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ದಿಢೀರ್ ದ್ರಾಕ್ಷಿ ದರ ಕುಸಿತ ಬೆಳೆಗಾರರನ್ನು ಕಂಗಾಲಾಗಿಸಿದೆ. ಇತ್ತೀಚಿನ ದಿನಗಳಲ್ಲಿ ದಾಳಿಂಬೆ ದರ ಗಗನಮುಖಿಯಾಗಿಯೇ ಇರುವುದರಿಂದ ಲಾಭದ ದೃಷ್ಟಿಯಲ್ಲಿ ದಾಳಿಂಬೆ ಬೆಳೆ ಉತ್ತಮ ಎಂಬ ನಿಲುವಿಗೆ ಬರುತ್ತಿರುವ ತೋಟಗಾರಿಕೆ ಬೆಳೆಗಾರರು ದಾಳಿಂಬೆ ಬೆಳೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ರಾಜ್ಯವಲ್ಲದೆ ನೆರೆ ರಾಜ್ಯಗಳಿಂದಲೂ ದಾಳಿಂಬೆಗೆ ಬೇಡಿಕೆ ಇರುವುದರಿಂದ ರಪ್ತು ಮಾಡಿ ಲಾಭಗಳಿಸಲು ಈ ಬೆಳೆ ಹೆಚ್ಚು ಲಾಭದಾಯಕವಾಗಿದೆ. ದ್ರಾಕ್ಷಿಗೆ ಹೋಲಿಕೆ ಮಾಡಿದರೆ ನಿರ್ವಹಣಾ ವೆಚ್ಚವೂ ಕಡಿಮೆ ಎಂಬ ಕಾರಣಕ್ಕೆ ದಾಳಿಂಬೆ ಬೆಳೆಗಾರರ ಪಾಲಿಗೆ ಹಾಟ್‌ೆವರೇಟ್ ಎನಿಸಿದೆ.
200 ಗಡಿಯಲ್ಲಿ ದಾಳಿಂಬೆ: ಕಳೆದೊಂದು ವರ್ಷದಿಂದ ದಾಳಿಂಬೆ ದರ ಇಳಿದಿಲ್ಲ, ಗುಣಮಟ್ಟದ ದಾಳಿಂಬೆ 200 ಗಡಿಯಲ್ಲಿಯೇ ಸಾಗಿದೆ. ವರಮಹಾಲಕ್ಷ್ಮಿ, ಗೌರಿಗಣೇಶ ಹಬ್ಬದ ಅವಧಿಯಲ್ಲಿ ಇದರ ದರ ತಗ್ಗಲಿದೆ ಎಂಬ ನಿರೀಕ್ಷೆ ಇತ್ತು ಆದರೆ ಈ ಬಾರಿ ದಾಳಿಂಬೆ ದರ ಗಗನಮುಖಿಯಾಗಿಯೇ ಸಾಗಿದೆ. ಈ ಹಿಂದೆ ಆರಂಭದಲ್ಲಿ ದಾಳಿಂಬೆ ಕೃಷಿ ಆರಂಭಿಸಿದ್ದ ರೈತರು ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಲಾಭಾಂಶ ಕಾಣಸಿಗುತ್ತಿದ್ದು, ರೈತರು ದಾಳಿಂಬೆಯತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ದ್ರಾಕ್ಷಿಗೆ ಹೋಲಿಸಿದರೆ ದಾಳಿಂಬೆಯನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಮಾರುಕಟ್ಟೆ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ. ತೋಟದಿಂದ ಹಣ್ಣುಗಳನ್ನು ಬಿಡಿಸಿ ಮಾರುಕಟ್ಟೆಗೆ ರೈತರೇ ನೇರವಾಗಿ ಸಾಗಿಸಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಬೆಳೆ ವಿಸ್ತರಣೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 378.12 ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಕೃಷಿ ನಡೆದಿತ್ತು. ಪ್ರಸ್ತುತ ಇದು 614.04 ಹೆಕ್ಟೇರ್‌ನಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಅಂದರೆ ಸುಮಾರು 235.92 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಕ್ಟೇರ್‌ನಲ್ಲಿ ದಾಳಿಂಬೆ ಕಾಣಸಿಗಲಿದೆ ಎಂಬ ನಿರೀಕ್ಷೆ ಇದೆ.

ದೇವನಹಳ್ಳಿ ಮುಂದು: ದೇವನಹಳ್ಳಿ 476.54 ಹೆಕ್ಟೇರ್‌ನಲ್ಲಿ ದಾಳಿಂಬೆ ಬೆಳೆಯಲಾಗುತ್ತಿದ್ದು ಜಿಲ್ಲೆಯಲ್ಲಿಯೇ ದೇವನಹಳ್ಳಿ ಮುಂದಿದೆ. ನಂತರದಲ್ಲಿ ದೊಡ್ಡಬಳ್ಳಾಪುರ 84.54 ಹೆಕ್ಟೇರ್, ನೆಲಮಂಗಲ 12.06 ಹೆಕ್ಟೇರ್, ಹೊಸಕೋಟೆ 41.29 ಹೆಕ್ಟೇರ್ ಸೇರಿ 614.04 ಹೆಕ್ಟೇರ್‌ನಲ್ಲಿ ದಾಳಿಂಬೆ ವಿಸ್ತರಿಸಿದೆ.

ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದಾಳಿಂಬೆ ಬೆಳೆಯಲು ರೈತರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದಕ್ಕೆ ಬೇಕಾದ ನೆರವು ಹಾಗೂ ಮಾರ್ಗದರ್ಶನವನ್ನು ತೋಟಗಾರಿಕೆ ಇಲಾಖೆಯಿಂದ ಮಾಡಲಾಗುತ್ತಿದೆ. ದಾಳಿಂಬೆ ಬೆಳೆಗಾರರಿಗೆ ಬೆಳೆ ನಾಟಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಸಹಾಯಧನ ನೀಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ದಾಳಿಂಬೆ ಬೆಳೆ ವಿಸ್ತರಣೆಯಾಗುತ್ತಿದೆ. ಇತರೆ ಹಣ್ಣುಗಳ ಬೆಳೆಗೆ ಹೋಲಿಸಿದರೆ ದಾಳಿಂಬೆ ನಿರ್ವಹಣೆ ಸುಲಭ ಹಾಗೂ ಹೆಚ್ಚು ಲಾಭದಾಯ ಎಂಬ ಕಾರಣಕ್ಕೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net