

ಮುದಗಲ್: ಪಟ್ಟಣ ಸಮೀಪದ ಗುಡಿಹಾಳ, ಮರಳಿ, ತೆರಿಭಾವಿ ಹಾಗೂ ತಲೇಖಾನ ಗ್ರಾಮದ ವಿವಿಧ ಭಾಗಗಳಲ್ಲಿ ಬೆಳೆಯಲಾದ ದಾಳಿಂಬೆಗೆ ದುಂಡಾಣು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸುವಂತಾಗಿದೆ.
ಪ್ರತಿ ವರ್ಷ ಸಾಂಪ್ರದಾಯಿಕ ಬೆಳೆ ಬೆಳೆದು ನಷ್ಟ ಅನುಭವಿಸಿ ರೋಸಿಹೋದ ರೈತರು ತೋಟಗಾರಿಕೆ ಬೆಳೆಯಿಂದ ಲಾಭವಾಗುತ್ತದೆ ಎಂದು ನೂರಾರು ಎಕರೆಯಲ್ಲಿ ದಾಳಿಂಬೆ, ಪಪ್ಪಾಯ, ತೆಂಗು, ಬಾಳೆ, ಮಾವು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಆದರೆ ಪ್ರತಿಕೂಲ ಹವಾಮಾನದ ಪರಿಣಾಮ ಹಾಗೂ ವೈಜ್ಞಾನಿಕ ತಿಳಿವಳಿಕೆ ಕೊರತೆಯಿಂದ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ.
ಲಿಂಗಸಗೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಮರಳಿ, ಗುಡಿಹಾಳ , ಬೊಮ್ಮನಾಳ, ಕನ್ನಾಳ ಗ್ರಾಮಗಳಲ್ಲಿಯೂ ದಾಳಿಂಬೆ ಬೆಳೆಗಾರರಿಗೆ ದುಂಡಾಣು ರೋಗ ಕಾಡುತ್ತಿದೆ.
ತಲೇಖಾನ ಗ್ರಾಮದ ರೈತ ಸಂತೋಷ ಮತ್ತು ತೋಮೆಶಪ್ಪ ಅವರ 10ಎಕರೆಯಲ್ಲಿ ಬೆಳೆದ ದಾಳಿಂಬೆ ಬೆಳೆ ದುಂಡಾಣು ರೋಗಕ್ಕೆ ತುತ್ತಾಗಿದೆ. ಮಹಾರಾಷ್ಟ್ರ ದಿಂದ 2,500 ಸಸಿಗಳನ್ನು ತಂದು ನಾಟಿ ಮಾಡಿದ್ದು 9ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಲಾಗಿದೆ. ಮೂರು ವಷರ್ದಿಂದ ನಾಟಿ ಮಾಡಲಾದ ದಾಳಿಂಬೆ ಬೆಳೆ ಈ ಬಾರಿ ಕೈಕೊಟ್ಟಿದೆ. ಫೆಬ್ರವರಿಯಲ್ಲಿ ಫಸಲಿಗೆ ಬಿಡಲಾಗಿದ್ದ ದಾಳಿಂಬೆಗೆ ಮೇ ತಿಂಗಳಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದ ಕರಿ ಚುಕ್ಕಿ ರೋಗ ಬಂದು ಬೆಳೆ ಹಾಳಾಗಿದೆ. ಕಟಾವಿಗೆ ಬಂದಿದ್ದ ದಾಳಿಂಬೆ ಸೀಳಿ, ಹಣ್ಣಿನ ರಸ ಸೋರಿಕೆಯಾಗಿದ್ದರಿಂದ ಮಾರುಕಟ್ಟೆ ಯಲ್ಲಿ ಬೆಲೆ ಇಲ್ಲದೇ ಕೇಳುವರಿಲ್ಲದಂತಾಗಿದೆ ಎಂದು ದಾಳಿಂಬೆ ಬೆಳೆದ ರೈತ ಸಂತೋಷ ಅಳಲು ತೋಡಿಕೊಂಡಿದ್ದಾರೆ.
ಸುಮಾರು 10 ಎಕರೆಯಲ್ಲಿ ಬೆಳೆಯಲಾಗಿದ್ದ ದಾಳಿಂಬೆ ಕಟಾವು ಮಾಡಿ ಹಳ್ಳಕ್ಕೆ ಸುರಿಯಲಾಗಿದೆ. ದಾಳಿಂಬೆಯ ಕೆಲ ಗಿಡಗಳು ಒಣಗಲಾರಂಭಿಸಿವೆ. ಇದರಿಂದ ಕಸ, ಕ್ರಿಮಿನಾಷಕ ಸಿಂಪಡಿಸಿದ ಖರ್ಚು ಬಾರದಂತಾಗಿದೆ.
ಕೃಷಿ ಇಲಾಖೆ ಸಲಹೆ ಪಡೆದು ಉಪಚಾರ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಸಾಲ ಶೂಲ ಮಾಡಿದ ರೈತರು ಸರಿಯಾಗಿ ಬೆಳೆ ಇಲ್ಲದೆ ಸಾಲಕ್ಕೆ ಗುರಿಯಾಗುವಂತಾಗಿದೆ ಎಂದು ರೈತನ ಕುಟುಂಬಸ್ಥರು ತಮ್ಮ ಅಳಲುತೊಡಿಕೊಂಡಿದ್ದಾರೆ.
ಲಕ್ಷಾಂತರ ರೂ.ಖುರ್ಚುಮಾಡಿ ಬೆಳೆಯಲಾದ ದಾಳಿಂಬೆಗೆ ಅಕಾಲಿಕ ಮಳೆಯಿಂದ ಕರಿ ಚುಕ್ಕಿರೋಗ ಕಾಣಿಸಿಕೊಂಡ ಪರಿಣಾಮ 10ಎಕರೆ ಬೆಳೆ ನಷ್ಟವಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿ ನಷ್ಟದ ಪರಿಹಾರ ನೀಡಬೇಕು.
ಸಂತೋಷ ಹಡಗಲಿ
ತಲೇಖಾನ ಗ್ರಾಮದ ರೈತ
ದಾಳಿಂಬೆಗೆ ದುಂಡಾಣು ರೋಗ ದುಂಬಾಲು ಬಿದ್ದಿದೆ. ಹಣ್ಣಿಗೆ ಬಂದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಈ ಕುರಿತು ರೈತರು ಜಾಗೃತಿ ವಹಿಸಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಹಣ ಪಾವತಿಸಿದಲ್ಲಿ ಬೆಳೆ ನಷ್ಟದ ಪರಿಹಾರ ಬರಲಿದೆ.
ಶೀ ಶೈಲ ವಾಗ್ಮೋರೆ
ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಲಿಂಗಸುಗೂರು