

ಕೊಪ್ಪಳ: ಕೇಂದ್ರ ಸರ್ಕಾರ ಚಿತ್ರದುರ್ಗದಲ್ಲಿ ಕ್ಲಸ್ಟರ್ ಡೆವಲಪ್ಮೆಂಟ್ ಯೋಜನೆಯಡಿ ದಾಳಿಂಬೆ ಕ್ಲಸ್ಟರ್ ನಿರ್ಮಿಸುತ್ತಿದ್ದು ಯೋಜನೆ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆ ಸೇರಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌವ್ಹಾಣ್ಗೆ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಗುರುವಾರ ದೆಹಲಿಯಲ್ಲಿ ಮನವಿ ಸಲ್ಲಿಸಿದರು.
ಕೊಪ್ಪಳದಲ್ಲಿ ಐದು ಸಾವಿರ ಹೆಕ್ಟರ್ನಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಭವಿಷ್ಯದಲ್ಲಿ 15 ಸಾವಿರ ಹೆಕ್ಟರ್ಗೆ ಹೆಚ್ಚಿಸಬಹುದು. ತೋಟಗಾರಿಕೆ ಬೆಳೆಗೆ ಸೂಕ್ತವಾಗಿದ್ದು, ಸಾಕಷ್ಟು ಅವಕಾಶಗಳಿವೆ. ಆದರೆ, ಕ್ಲಸ್ಟರ್ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆ ಸೇರಿಸದೇ ಕಡೆಗಣಿಸಲಾಗಿದೆ. ಇದರಿಂದ ಜಿಲ್ಲೆಯ ದಾಳಿಂಬೆ ಬೆಳೆಗಾರರಿಗೆ ಅನ್ಯಾಯವಾಗಲಿದೆ. ಜತೆಗೆ ಮಾರುಕಟ್ಟೆ ಸಮಸ್ಯೆ ಕಾಡಲಿದೆ. ರೈತರಿಗೆ ಬೆಳೆಗೆ ಪ್ರೋತ್ಸಾಹ, ಸಹಾಯಧನ ಇತ್ಯಾದಿ ಸೌಲಭ್ಯ ದೊರೆಯುವುದಿಲ್ಲವೆಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯನ್ನು ಯೋಜನೆ ವ್ಯಾಪ್ತಿಗೆ ಸೇರಿಸಬೇಕು. ತಕ್ಷಣ ಈ ಸಂಬಂಧ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ರೈತರಿಗೆ ಯೋಜನೆ ಲಾಭ ದೊರೆಯುವಂತೆ ಮಾಡಬೇಕೆಂದು ಮನವಿ ಮಾಡಿದರು. ಈ ಬಗ್ಗೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಸಚಿವರು ಭರವಸೆ ನೀಡಿ ಮನವಿ ಸ್ವೀಕರಿಸಿದರು.