

ಸಿಂಧನೂರು: ನಿರಂತರ ಮಳೆಗೆ ತಾಲೂಕಿನ ಹುಡಾ, ಗೊಬ್ಬರಕಲ್, ಸೋಮಲಾಪುರ ಮತ್ತು ಮುಕ್ಕುಂದಾ ಗ್ರಾಮಗಳಲ್ಲಿ ದಾಳಿಂಬೆ ಬೆಳೆ ಹಾನಿಗೀಡಾಗಿದ್ದು, ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.
ಪ್ರತಿ ಎಕರೆಗೆ ಕನಿಷ್ಠ 5 ಟನ್ ದಾಳಿಂಬೆ ಇಳುವರಿ ಬರುತ್ತದೆ. ಒಂದು ಟನ್‌ಗೆ ಕನಿಷ್ಠ 1 ಲಕ್ಷ ರೂ. ಆದಾಯ ಬರುತ್ತದೆ. ಸುಮಾರು 75 ಸಾವಿರ ಎಕರೆಯಲ್ಲಿ ಬೆಳೆದ ದಾಳಿಂಬೆ ಹಾನಿಯಾಗಿರುವುದರಿಂದ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಇನ್ನೊಂದು ತಿಂಗಳಲ್ಲಿ ದಾಳಿಂಬೆ ಕೈಗೆ ಬರುತ್ತದೆ ಎನ್ನುವಷ್ಟರಲ್ಲಿ ಸತತವಾಗಿ ಸುರಿದ ಮಳೆಯಿಂದ ನಷ್ಟವಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಪ್ರತಿ ಎಕರೆಗೆ ಚಾಟ್ನಿ ಮಾಡುವುದು, ಕೊಟ್ಟಿಗೆ ಗೊಬ್ಬರ, ಕ್ರಿಮಿನಾಶಕ, ಕೂಲಿ, ಬಿಸಿಲಿನಿಂದ ರಕ್ಷಣೆ ಮಾಡಲು ಹಾಕಿದ ಪರದೆ ಸೇರಿದಂತೆ 2.50 ಲಕ್ಷ ರೂ. ಖರ್ಚು ತಗಲುತ್ತದೆ ಎಂದು ರೈತರು ಹೇಳುತ್ತಾರೆ. ಗೊಬ್ಬರಕಲ್ ಗ್ರಾಮದ ಜಮೀನಿನಲ್ಲಿ ದಾಳಿಂಬೆ ಬೆಳೆಯಲಾಗಿದ್ದು, ಏಕಾಏಕಿ ಸುರಿದ ಮಳೆ ಮತ್ತು ಗಾಳಿಗೆ ದಾಳಿಂಬೆ ಗಿಡಗಳು ಮುರಿದ್ದು ಬಿದ್ದಿವೆ. ಹಣ್ಣುಗಳು ಉದುರಿವೆ. ಸಂಪೂರ್ಣ ಹಣ್ಣಾಗದೆ ಮಾರಾಟ ಮಾಡಲು ಬರುವುದಿಲ್ಲ. ಇದರಿಂದ ರೈತರು ಆರ್ಥಿಕ ನಷ್ಟ ಎದುರಿಸಬೇಕಾಗಿದೆ.
ರೋಗ ತಗಲುವ ಭೀತಿ ತೇವಾಂಶ ಹೆಚ್ಚಾದಷ್ಟು ದಾಳಿಂಬೆಗೆ ನಾನಾ ರೋಗಗಳು ಆವರಿಸುತ್ತವೆ. ಅದರಲ್ಲೂ ಪ್ರಮುಖವಾಗಿ ಬ್ಯಾಕ್ಟಿರಿಯಾ, ಅಂಗಮಾರಿ, ದುಂಡಾಣು, ಕಾಯಿಕೊರಕ, ಸೊರಗು ರೋಗಗಳು ಕಾಣಿಸಿಕೊಂಡು ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ದಾಳಿಂಬೆಗೆ ಒಂದು ಬಾರಿ ಬ್ಯಾಕ್ಟಿರಿಯಾ ಆಕ್ರಮಿಸಿದರೆ ಇಡೀ ತೋಟ ನಾಶವಾಗಿಬಿಡುತ್ತದೆ ಎನ್ನುವುದು ರೈತರ ಅಳಲಾಗಿದೆ. ಸರ್ಕಾರ ಕೂಡಲೇ ದಾಳಿಂಬೆ ಬೆಳೆ ನಷ್ಟದ ಬಗ್ಗೆ ಸರ್ವೇ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂಬುದು ದಾಳಿಂಬೆ ಬೆಳೆಗಾರರ ಒತ್ತಾಯವಾಗಿದೆ.
ಐದು ಎಕರೆಯಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದೆ. ಉತ್ತಮ ಫಸಲು ಬರುವ ನಿರೀಕ್ಷೆ ಇತ್ತು. ಆದರೆ, ಕಳೆದ ಜೂನ್, ಆಗಸ್ಟ್‌ನಲ್ಲಿ ಸತತ ಬಿದ್ದ ಮಳೆಯಿಂದ ಬೆಳೆ ಸಂಪೂರ್ಣ ನಷ್ಟವಾಗಿದೆ. ಹಣ್ಣುಗಳೆಲ್ಲ ನೆಲಕ್ಕೆ ಉದುರಿವೆ. ಭತ್ತದ ಬದಲು ಪರ್ಯಾಯ ಬೆಳೆ ಬೆಳೆಯಲು ಹೋದರೆ ನಮಗೆ ಈ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಸರ್ವೇ ನಡೆಸಿ ಅಗತ್ಯ ಪರಿಹಾರ ನೀಡಬೇಕು. ನಾಗರಾಜ ಹುಡಾ