

ನಾಯಕನಹಟ್ಟಿ: ಜಿಲ್ಲೆಯಲ್ಲಿ ಮುಂದಿನ 4 ವರ್ಷಗಳಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲು ಹಾಗೂ ಪುನರುಜ್ಜೀವನಗೊಳಿಸಲು ರೈತರಿಗೆ ಉತ್ತೇಜನ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಶರಣಬಸಪ್ಪ ಬೋಗಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ದಾಳಿಂಬೆ ಬೆಳೆಗಾರರಿಗೆ ತರಬೇತಿ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿ, ದಾಳಿಂಬೆ ಬೆಳೆಯುವ ರೈತರಿಗೆ ಶೇ.40 ರಷ್ಟು ಸಬ್ಸಿಡಿ ದರದಲ್ಲಿ ಸಮಗ್ರ ಸೌಲಭ್ಯದ ಬೆಂಬಲ ಒದಗಿಸಲಾಗುತ್ತದೆ ಎಂದರು.
ನಾಯಕನಹಟ್ಟಿ ಹೋಬಳಿಯು ದಾಳಿಂಬೆ ಬೆಳೆಯಲು ಉತ್ತಮ ಸ್ಥಳ. ಬೆಳೆ ನಿರ್ವಹಣಾ ವೆಚ್ಚ ಕಡಿತ ಮಾಡುವುದು, ಅತ್ಯಾಧುನಿಕ ಮಾದರಿಯಲ್ಲಿ ದಾಳಿಂಬೆ ಬೆಳೆಯುವುದು ಹಾಗೂ ರೋಗ ತಡೆಯಲು ಬೆಳೆಗಾರರಿಗೆ ವಿಜ್ಞಾನಿಗಳಿಂದ ಮಾರ್ಗದರ್ಶನ ಕೊಡಿಸಲಾಗುವುದು ಎಂದು ತಿಳಿಸಿದರು.
ಅಸೋಸಿಯೇಟೆಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್ ಸಿಇಒ ಮನೋಜ್ ಕುಶಾಲಪ್ಪ ಮಾತನಾಡಿ, ದಾಳಿಂಬೆ ಬೆಳೆ ಸಮಗ್ರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರವು ದೇಶದಾದ್ಯಂತ 53 ಕ್ಲಸ್ಟರ್‌ಗಳನ್ನು ಗುರುತಿಸಿದೆ. ತುಮಕೂರು, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ 9 ತಾಲೂಕುಗಳು ಇವೆ ಎಂದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ವಿರೂಪಾಕ್ಷಪ್ಪ, ವಿಜ್ಞಾನಿ ಸುನಿಲ್ ತಮಗಲೆ, ಯೋಜನೆ ಸಮನ್ವಯಾಧಿಕಾರಿ ಎಂ.ಚಂದ್ರಶೇಖರ್, ಬೆಳೆಗಾರರಾದ ಜೆ.ಆರ್.ರವಿಕುಮಾರ್, ತಿಪ್ಪಾರೆಡ್ಡಿ, ರಾಮರೆಡ್ಡಿ, ಜಿ.ಬಿ.ಮುದಿಯಪ್ಪ, ಪಿ.ಓಬಯ್ಯ, ಮಂಜುನಾಥ, ಬೋರಣ್ಣ ಇದ್ದರು.