ದಾಳಿಂಬೆ ಬೆಳೆ ಪುನಶ್ಚೇತನಕ್ಕೆ ಸಕಲ ಕ್ರಮ: ಎಐಸಿ ಸಂಸ್ಥೆ ಮುಖ್ಯಸ್ಥ ಮನೋಜ್ ಕುಶಾಲಪ್ಪ

131
Published on

ಮೊಳಕಾಲ್ಮೂರು: ರೈತರ ಆದಾಯ ಹೆಚ್ಚಿಸುವಲ್ಲಿ ಭರವಸೆ ಮೂಡಿಸಿರುವ ದಾಳಿಂಬೆ ಬೆಳೆಯ ಸಮಗ್ರ ಪುನಶ್ಚೇತನಕ್ಕೆ ಇಲಾಖೆ ಸಹಭಾಗಿತ್ವದಲ್ಲಿ ರೈತಸ್ನೇಹಿ ಸಂಸ್ಥೆ ಹೆಚ್ಚು ಪ್ರಾಧಾನ್ಯ ನೀಡುತ್ತಿದೆ ಎಂದು ಎಐಸಿ ಮುಖ್ಯಸ್ಥ ಮನೋಜ್ ಕುಶಾಲಪ್ಪ ಹೇಳಿದರು.

ತಾಲೂಕಿನ ರಾಂಪುರದ ಹುಚ್ಚಮಲ್ಲಪ್ಪ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ದಾಳಿಂಬೆ ಬೆಳೆ ಪುನಶ್ಚೇತನ ಕುರಿತು ರೈತರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ದಾಳಿಂಬೆ ಬೆಳೆ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರದ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ಮೊಳಕಾಲ್ಮೂರು ತಾಲೂಕು ಆಯ್ಕೆಯಾಗಿರುವುದು ರೈತರ ಆರ್ಥಿಕ ಸಬಲೀಕರಣಕ್ಕೆ ಅನುಕೂಲವಾಗಿದೆ. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಹೊಸದಾಗಿ 3 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆ ವಿಸ್ತರಣೆಗೆ ಯೋಜಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಸಹಾಯಕ ನಿರ್ದೇಶಕ ಕೆ.ಎ.ಸುಧಾಕರ ಮಾತನಾಡಿ, ಈ ಭಾಗದ ಕೆಂಪು ಮಿಶ್ರಿತ ಹಾಗೂ ಉತ್ತಮ ಹವಾಗುಣವುಳ್ಳ ಮಣ್ಣು ದಾಳಿಂಬೆ ಬೆಳೆಗೆ ಯೋಗ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಹಳೆಯ ತೋಟಗಳ ಮರು ಜೀವನಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದರು.

ರೈತರಿಗೆ ವೈಜ್ಞಾನಿಕ ಪದ್ಧತಿಯಲ್ಲಿ ರೋಗ ನಿಯಂತ್ರಣ ಕ್ರಮಗಳ ಬಗ್ಗೆ ಕಾಲ ಕಾಲಕ್ಕೆ ವಿಜ್ಞಾನಿಗಳಿಂದ ತರಬೇತಿ ಕೊಡಿಸಲಾಗುವುದು. ಹೊಸದಾಗಿ ದಾಳಿಂಬೆ ಬೆಳೆಗೆ ಆರ್ಥಿಕ ಸಹಾಯ, ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆಗೆ ಎಐಸಿ ಸಂಸ್ಥೆ ನಿರ್ವಹಣೆ ವಹಿಸಿಕೊಂಡಿದೆ ಎಂದು ತಿಳಿಸಿದರು.

ದಾಳಿಂಬೆಯನ್ನು ಕಾಡುತ್ತಿರುವ ದುಂಡಾಣು ಅಂಗಮಾರಿ, ಸೊರಗು ಬಾಧೆ, ಕಪ್ಪು ಚುಕ್ಕೆ, ಸೀಳು ರೋಗ ಹತೋಟಿ ಕ್ರಮಕ್ಕೆ ಕೃಷಿ ವಿಜ್ಞಾನಿಗಳಿಂದ ಸಮಗ್ರ ಮಾಹಿತಿ ಕೊಡಲಾಗುವುದು ಎಂದು ಹೇಳಿದರು.

ಯೋಜನೆ ಸಮನ್ವಯಾಧಿಕಾರಿ ಎಂ.ಚಂದ್ರಶೇಖರ, ವಿಜ್ಞಾನಿ ಡಾ.ಸುನಿಲ್‌ಕುಮಾರ, ತೋಟಗಾರಿಕೆ ಸಹಾಯಕ ಅಧಿಕಾರಿಗಳಾದ ವಿಜಯಕುಮಾರ, ಎಚ್.ಹರೀಶ್, ರೈತರಾದ ಜೆ.ಇ.ನಾಗರಾಜ್, ಎಚ್.ಕೃಷ್ಣಮೂರ್ತಿ, ಕೆ.ಎಲ್.ಮೋಹನ, ತಿಪ್ಪೇಸ್ವಾಮಿ, ಆರ್.ಬಸವರಾಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net