ಪುಂಡರ ಅಡ್ಡೆಯಾಯ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್

K.r.pete
Published on

ಕೆ.ಆರ್.ಪೇಟೆ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸರ್ಕಾರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಅರ್ಧಕ್ಕೆ ನಿಂತಿದೆ.

60ರ ದಶಕದಲ್ಲಿ ಕ್ಷೇತ್ರದ ಶಾಸಕರಾಗಿದ್ದ ದಿ. ಎಂ.ಕೆ.ಬೊಮ್ಮೇಗೌಡರ ಇಚ್ಛಾಶಕ್ತಿಯಿಂದ ನಿರ್ಮಾಣವಾದ ಕಾಲೇಜಿನಲ್ಲಿ ವಿದ್ಯಾರ್ಥಿ ನಿಲಯ ಇತ್ತು. ಆದರೆ, ನಿರ್ವಹಣೆ ಕೊರತೆಯಿಂದ 2013ರಲ್ಲಿ ಮುಚ್ಚಿದ್ದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಯಿತು. ಈ ಆವರಣದಲ್ಲೇ ನೂತನ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಮಾಡಲು 1.5 ಕೋಟಿ ರೂ.ವೆಚ್ಚದಲ್ಲಿ ಸರ್ಕಾರ ಅನುಮೋದನೆ ನೀಡಿತು. ಕಾಮಗಾರಿ ಗುತ್ತಿಗೆ ಪಡೆದಿದ್ದ ಮೈಸೂರಿನ ಗುತ್ತಿಗೆದಾರ ಪಿ.ವಿ.ಚಲಪತಿನಾಯ್ಡು ಕಟ್ಟಡ ನಿರ್ಮಾಣ ಪ್ರಾರಂಭ ಮಾಡಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಿಟಕಿ, ಬಾಗಿಲು, ನೆಲಹಾಸು, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸದೆ ಕಾಮಗಾರಿ ಸ್ಥಗಿತಗೊಳಿಸಿದ್ದರಿಂದ ಇದೀಗ ಕಟ್ಟಡ ಭೂತಬಂಗಲೆಯಂತಾಗಿದೆ. ಸ್ಥಗಿತಗೊಂಡು 8 ವರ್ಷಗಳೇ ಕಳೆದಿವೆ.

ಕಟ್ಟಡ ಪಾಳು ಬಿದ್ದಿರುವುದರಿಂದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಇದೀಗ ಜೂಜುಕೋರರು, ಮದ್ಯವ್ಯಸನಿಗಳ ಅಡ್ಡೆಯಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಪುಂಡರು ಮದ್ಯ ಕುಡಿದು ಎಲ್ಲೆಂದರಲ್ಲಿ ಬಾಟಲ್‌ಗಳನ್ನು ಬಿಸಾಡಿದ್ದಾರೆ. ಕಟ್ಟಡದೊಳಗೆ ಶೌಚ ಮಾಡಿರುವುದರಿಂದ ಗಬ್ಬೆದು ನಾರುತ್ತಿದೆ. ಕಟ್ಟಡದ ಸಮೀಪ ನಿಲ್ಲಲು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ಶೈಕ್ಷಣಿಕ ಚಟುವಟಿಕೆಗೆ ಕಾರಣವಾಗಬೇಕಿದ್ದ ಹಾಸ್ಟೆಲ್ ಕಟ್ಟಡ ಪುಂಡರ ಹಾಟ್‌ಸ್ಪಾಟ್ ಆಗಿರುವುದು ಶೋಚನಿಯ.

ಪ್ರಾಂಶುಪಾಲೆ ವಿಜಯಾ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳ ಕೊರತೆಯಿಂದ ಹಳೇ ಹಾಸ್ಟೆಲ್ ಸ್ಥಗಿತಗೊಂಡಿತ್ತು. ಕಟ್ಟಡ ನವೀಕರಣಗೊಳಿಸಿ ಬಿಸಿಎಂ ಇಲಾಖೆಗೆ ಹಸ್ತಾಂತರಿಸುವ ಕೊನೇ ಹಂತದಲ್ಲಿದೆ. ಮುಗಿದ ನಂತರ ಹಸ್ತಾಂತರವಾಗಲಿದೆ. ಮತ್ತೊಂದು ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಇಂಜಿನಿಯರ್‌ಗಳಿಗೂ ಪತ್ರ ಬರೆದಿದ್ದೇನೆ. ಕಟ್ಟಡ ಪೂರ್ಣವಾಗಲು ಕ್ರಮವಹಿಸಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net