

ಕಾರವಾರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗೊಂಡು 50 ವರ್ಷಗಳಾದ ಹಿನ್ನೆಲೆಯಲ್ಲಿ ಮಂಡಳಿಯ ಸುವರ್ಣ ಮಹೋತ್ಸವ ಆಚರಣೆಯ ಪ್ರಯುಕ್ತ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಕಾರವಾರ ಹಾಗೂ ಮೆ. ಇಐಡಿ ಪ್ಯಾರಿ, ಇಂಡಿಯಾ ಲಿಮಿಟೆಡ್, ಹಳಿಯಾಳ ಇವರ ಸಹಯೋಗದೊಂದಿಗೆ ಹಳಿಯಾಳದ ಮೆ. ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್‌ನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ್ ಕಂಪನಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳು, ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ವಿಲೇವಾರಿ ಬಗ್ಗೆ, ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ಧಮಾಲಿನ್ಯ ಜೀವ ವೈದ್ಯಕೀಯ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಇವುಗಳ ನಿರ್ವಹಣೆ ಹಾಗೂ ಇವುಗಳ ನಿರ್ವಹಣೆಯಲ್ಲಿ ಮಂಡಳಿಯ ಕಾರ್ಯವೈಖರಿಯನ್ನು ಶಕ್ತಿ ಬಿಂದು ಪ್ರದರ್ಶನ ಮೂಲಕ ತಿಳಿಸಿದರು.
ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳನ್ನು (ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಸ್ಟ್ರಾಗಳು, ಕ್ಲಿಂಗ್ ಫಿಲ್ಮ್ಸ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೊಕಾಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸನಿಂದ ತಯಾರಾದಂತಹ ವಸ್ತುಗಳು) ಉಪಯೋಗಿಸದಂತೆ ಜಾಗೃತಿ ಮೂಡಿಸಿ, ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉಪಯೋಗವನ್ನು
ಸಂಪೂರ್ಣವಾಗಿ ನಿಷೇಧಿ ಬದಲಾಗಿ ಅಡಿಕೆ ಎಲೆ / ಕಟ್ಟಿಗೆ / ಗಾಜು / ಪೇಪರ್ / ಸ್ಟೀಲ್‌ನಿಂದ ತಯಾರಿಸಿದ ವಸ್ತುಗಳನ್ನು ಬಳಸುವಂತೆ ತಿಳಿಸಲಾಯಿತು. ಕೇವಲ ಬಟ್ಟೆ ಚೀಲಗಳನ್ನು ಬಳಸುವಂತೆ ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಬಳಸಿದಲ್ಲಿ ದಂಡವನ್ನು ವಿಧಿಸಲಾಗುವುದು ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಂಪನಿಯ ಅಧಿಕಾರಿ ರಾಜೇಂದ್ರ ಆಚಾರ್ಯ, ಮ್ಯಾನೇಜರ್ (ಮ್ಯಾಕೆನಿಕಲ್) ಉಸ್ಮಾನ್ ಸಿ, ಡಿವೈ ಮ್ಯಾನೇಜರ್ (ಪರಿಸರ) ಪ್ರೀತಮ್ ಪಾಟೀಲ್, ಹಿರಿಯ ಕಾರ್ಯಕಾರಿ ಅಧಿಕಾರಿ (ಪರಿಸರ) ವಿಶ್ವನಾಥ ಬಿ.ಎಮ್ ಹಾಜರಿದ್ದರು.