ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳ ಪ್ರಮಾಣಪತ್ರ! : ಮಾಲಿನ್ಯಮುಕ್ತ ನವಕೇರಳ ಅಭಿಯಾನದಲ್ಲಿ ಪ್ರದಾನ ಪಾಲಕರ ಆಕ್ರೋಶ

New Project (43)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

‘ಮಾಲಿನ್ಯಮುಕ್ತ ನವ ಕೇರಳಕ್ಕಾಗಿ ಜನಪರ ಅಭಿಯಾನ’ದ ಅಂಗವಾಗಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಹಸಿರು ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಲಯಾಳ ಪ್ರಮಾಣಪತ್ರ ವಿತರಿಸಲಾಗುತ್ತಿದೆ. ತಾವು ಕೈಗೊಳ್ಳುತ್ತಿರುವ ಆಂದೋಲನದ ಬಗ್ಗೆ ಲಭಿಸಿದ ಪ್ರಮಾಣಪತ್ರದಲ್ಲಿ ನಮೂದಿಸಿರುವ ಮಾಹಿತಿ ಬಗ್ಗೆ ಕಿಂಚಿತ್ತೂ ಅರಿಯದ ವಿದ್ಯಾರ್ಥಿಗಳಿಗೆ ಇನ್ನು ಅಭಿಯಾನದ ಉದ್ದೇಶವಂತೂ ಅರ್ಥೈಸಿಕೊಳ್ಳಲಾಗದ ಸ್ಥಿತಿಯಿದೆ. ಜಿಲ್ಲೆಯ ಅಚ್ಚ ಕನ್ನಡ ಪ್ರದೇಶ ಎನಿಸಿಕೊಂಡಿರುವ ಎಣ್ಮಕಜೆ ಪಂಚಾಯಿತಿಯಲ್ಲಿ ನವೆಂಬರ್ 14ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೂ ಮಲಯಾಳ ಸರ್ಟಿಫಿಕೇಟನ್ನೇ ವಿತರಿಸಲಾಗಿದೆ. ಇದರಲ್ಲಿ ಒಳಗೊಂಡಿರುವ ಮಾಹಿತಿಯನ್ನು ಯಾವೊಬ್ಬ ವಿದ್ಯಾರ್ಥಿಯೂ ಅರ್ಥೈಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಈ ಸರ್ಟಿಫಿಕೇಟ್‌ನಲ್ಲಿ ಮಲಯಾಳದಲ್ಲಿ ನಮೂದಿಸಿರುವ ‘ಕುಟ್ಟಿಗಳುಡೆ ಹರಿತಸಭಾ ಸಾಕ್ಷೃಪತ್ರ’ ಎಂಬ ದಪ್ಪಕ್ಷರದ ಮಾಹಿತಿಯಾಗಲಿ, ಸಣ್ಣ ಅಕ್ಷರದಲ್ಲಿ ನಮೂದಿಸಿರುವ ವಿಷಯಗಳಾಗಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಒಂದೂ ಅರ್ಥವಾಗುತ್ತಿಲ್ಲ. ಕಾಸರಗೋಡು ಜಿಲ್ಲೆಯ ನೂರಾರು ಮಂದಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ಸರ್ಟಿಫಿಕೇಟ್ ಒದಗಿಸಿಕೊಡಬೇಕೆಂಬ ಸಾಮಾನ್ಯ ಜ್ಞಾನವಿಲ್ಲದ ಅಧಿಕಾರಿಗಳು, ಇಲ್ಲಿ ಉದ್ದೇಶಪೂರ್ವಕವಾಗಿ ಮಲಯಾಳಂ ಹೇರಿಕೆಗೆ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಬಹು ಉದ್ದೇಶಿತ ಮಾಲಿನ್ಯಮುಕ್ತ ಹೋರಾಟಕ್ಕೆ ಎಲ್ಲ ಭಾಷಿಗ ಸಮುದಾಯದವರನ್ನೂ ಒಟ್ಟುಗೂಡಿಸಿ ಮುಂದಕ್ಕೊಯ್ಯುವ ಆಸಕ್ತಿ ಸರ್ಕಾರಕ್ಕಿದ್ದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೂ ಮಾಹಿತಿ ಲಭ್ಯವಾಗಿಸುವ ರೀತಿಯಲ್ಲಿ ನಿರ್ದೇಶನ, ಸೂಚನೆ ಒಳಗೊಂಡ ಮುದ್ರಣ ಸಾಮಗ್ರಿ ಕನ್ನಡ ಮಾಧ್ಯಮದಲ್ಲೂ ನೀಡುವಂತಾಗಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲೇ ನೀಡುವಂತೆ ಆಗ್ರಹ ಕಾಸರಗೋಡು ಜಿಲ್ಲೆಯಲ್ಲಿ 40 ಸಾವಿರದಷ್ಟು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿದ್ದು, ಇವರಿಗೆ ಉಪಕಾರವಾಗುವ ರೀತಿಯಲ್ಲಿ ಇಂತಹ ಸರ್ಟಿಫಿಕೆಟ್, ಸೂಚನಾ ಪತ್ರಗಳು ಲಭಿಸಿದಲ್ಲಿ, ಸರ್ಕಾರ ಆಯೋಜಿಸುವ ಅಭಿಯಾನಗಳು ಯಶಸ್ವಿಯಾಗಲು ಸಾಧ್ಯವಿದೆ. ವಿವಿಧ ಇಲಾಖೆಗಳು ನೀಡುವ ಅಭಿನಂದನಾ ಪತ್ರ, ಪ್ರಮಾಣಪತ್ರಗಳು, ಮಾಹಿತಿಪತ್ರಗಳನ್ನು ಮಲಯಾಳದೊಂದಿಗೆ ಕನ್ನಡದಲ್ಲೂ ವಿತರಿಸುವಂತೆ ಕನ್ನಡಪರ ಸಂಘಟನೆಗಳೂ ಆಗ್ರಹಿಸಿವೆ.

ಇಲಾಖೆ ಪೂರೈಸಿರುವ ಪ್ರಮಾಣಪತ್ರವನ್ನು ತರಾತುರಿಯಿಂದ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮಲಯಾಳದೊಂದಿಗೆ ಕನ್ನಡದಲ್ಲೂ ಪ್ರಮಾಣಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೂ ಮನವಿ ಮಾಡಲಾಗುವುದು. ಸೋಮಶೇಖರ ಜೆ.ಎಸ್. ಅಧ್ಯಕ್ಷ ಎಣ್ಮಕಜೆ ಗ್ರಾಪಂ https://www.vijayavani.net/cultural-celebration https://www.vijayavani.net/bhajana-kammata-at-alankar-school

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net