

| ಅವಿನಾಶ ಮೂಡಂಬಿಕಾನ/ಸತೀಶ್ ಕೆ.ಬಳ್ಳಾರಿ ಬೆಂಗಳೂರು
ಹೈಕೋರ್ಟ್ ಸ್ಪಷ್ಟ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ಕೊಟ್ಟಿದೆ. ಆದರೆ, ಹಸಿರು ಪಟಾಕಿ ಹೆಸರಿನಲ್ಲಿ ನೀರಿ ಹಾಗೂ ಪೆಸೊ ಹಸಿರು ಬಣ್ಣದ ಲಾಂಛನ ಇಲ್ಲದಿರುವ ಪಟಾಕಿಗಳ ಮಾರಾ ಟದ ಭರಾಟೆ ಜೋರಾಗಿದೆ. ಎಲ್ಲವೂ ಹಸಿರು ಪಟಾಕಿಗಳೇ ಎಂದು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ. ಯಾವುದು ಹಸಿರು ಪಟಾಕಿ, ಯಾವುದು ರಾಸಾಯನಿಕ ಪಟಾಕಿ ಎಂಬ ಬಗ್ಗೆ ಗೊಂದಲ ಸಾರ್ವಜನಿಕರಲ್ಲಿ ಉಂಟಾಗಿದೆ.
ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರದ ಆದೇಶಕ್ಕೂ ಮುನ್ನವೇ ವ್ಯಾಪಾರಿಗಳು ಹೊರ ರಾಜ್ಯಗಳಿಂದ ಹಾಗೂ ಸ್ಥಳೀಯವಾಗಿ ತಯಾರಿಸಿದ ಮಾಮೂಲಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದು, ಜನರು ಖರೀದಿಗೆ ಹೋದಾಗ ಎಲ್ಲವೂ ಹಸಿರು ಪಟಾಕಿ ಎಂದು ಹೇಳುತ್ತಾ ಮಾರಾಟ ಮಾಡುತ್ತಿರುವುದು ವಿಜಯವಾಣಿ ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.
ರಾಜಾಜಿ ನಗರ, ಇಂದಿರಾನಗರ ಸೇರಿ ನಗರದಾದ್ಯಂತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಅಧಿಕಾರಿಗಳು ದಾಳಿ ನಡೆಸಿ ನೀರಿ, ಪೆಸೊದ ಲಾಂಛನ ಇಲ್ಲದ ಲಕ್ಷಾಂತರ ರೂ. ಮೌಲ್ಯದ ಪಟಾಕಿಗಳನ್ನು ಜಪ್ತಿ ಮಾಡಿದ್ದಾರೆ.
ಮಾಲಿನ್ಯದ ಪಟಾಕಿಗೆ ಹಸಿರು ಪಟಾಕಿ ಸ್ಟಿಕ್ಕರ್: ಸಾಮಾನ್ಯ ಪಟಾಕಿಗಳಿಗೆ ಹಸಿರು ಪಟಾಕಿ ಎಂಬ ಮುದ್ರಿತ ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈಗಾಗಲೇ ಪಟಾಕಿ ಮಳಿಗೆಗಳಿಂದ ಖರೀದಿ ಮಾಡಿರುವ ಎಲ್ಲ ಪಟಾಕಿಗಳು ಶೇ.100 ಹಸಿರು ಪಟಾಕಿಗಳಲ್ಲ. ನಗರದಲ್ಲಿ ಮಾರಾಟವಾಗುತ್ತಿರುವ ಶೇ.40 ಮಾಲಿನ್ಯ ಹೆಚ್ಚು ಮಾಡುವ ರಾಸಾಯನಿಕ ಹೊಗೆ, ಶಬ್ದ ಹಾಗೂ ಉಸಿರಾಟ ತೊಂದರೆಗೆ ಕಾರಣವಾಗುವ ಪಟಾಕಿ ಗಳಾಗಿವೆ. ಸಾಮಾನ್ಯ ಪಟಾಕಿಗಳ ಬಾಕ್ಸ್ಗಳ ಮೇಲೆ ಹಸಿರು ಪಟಾಕಿ ಎಂಬ ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಸರ್ಕಾರದ ಮಾಲಿನ್ಯ ತಡೆಗಟ್ಟುವ ಉದ್ದೇಶಕ್ಕೆ ಹಿನ್ನಡೆಯಾಗಿದೆ.
ವಿಜಯವಾಣಿಗೆ ಕಂಡಿದ್ದೇನು?
ಏನಿದು ಹಸಿರು ಪಟಾಕಿ?
ಹಾನಿಕಾರಕ ರಾಸಾಯನಿಕ ವಸ್ತುಗಳನ್ನು ಒಳಗೊಳ್ಳದ, ಹೆಚ್ಚು ವಾಯುಮಾಲಿನ್ಯ ಉಂಟು ಮಾಡದ ಪಟಾಕಿಗಳನ್ನು ಹಸಿರು ಪಟಾಕಿ ಎನ್ನಲಾಗುತ್ತದೆ. ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಕಡಿಮೆ ಮಾಲಿನ್ಯಕಾರಕವಾಗಿವೆ. ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ರೂಪಿಸಿರುವ ನಿಯಮಗಳ ಅನುಸಾರವಾಗಿ ಹಸಿರು ಪಟಾಕಿಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ಪೆಟ್ರೋಲಿಯಂ ಹಾಗೂ ಸ್ಪೋಟಕಗಳ ಸುರಕ್ಷತಾ ಸಂಸ್ಥೆ (ಪೆಸೊ) ಅನುಮೋದಿಸಿದೆ. ಹೀಗಾಗಿ ಈ ಎರಡೂ ಸಂಸ್ಥೆಗಳು ರೂಪಿಸಿರುವ ಲಾಂಛನ ವನ್ನು ಹಸಿರು ಪಟಾಕಿಗಳ ಬಾಕ್ಸ್ ಗಳಲ್ಲಿ ಮುದ್ರಿಸಲಾಗುತ್ತದೆ. ಗ್ರಾಹಕರು ಈ ಲಾಂಛನ ಗಮನಿಸಿ ಪಟಾಕಿ ಖರೀದಿಸಬೇಕು ಎಂದು ಕೆಎಸ್ಪಿಸಿಬಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮಾರಾಟ ಸ್ಥಳಗಳಲ್ಲಿ ಅಗ್ನಿಶಾಮಕ ಸಾಧನಗಳಿಲ್ಲ
ಪಟಾಕಿ ಮಾರಾಟಕ್ಕೆ ನಗರದಲ್ಲಿ 20ಕ್ಕೂ ಹೆಚ್ಚು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಆದರೆ, ಬಹುತೇಕ ಕಡೆ 5ಕ್ಕಿಂತ ಕಡಿಮೆ ಮಾರಾಟ ಮಳಿಗೆಗಳಿವೆ. ಆದರೆ, ಇಂತಹ ಪಟಾಕಿ ಮಾರಾಟ ಸ್ಥಳದಲ್ಲಿ ಅಗ್ನಿ ಅವಘಡ ತಡೆಯುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ರಾಜಾಜಿನಗರದಲ್ಲಿ 22 ಪಟಾಕಿ ಮಾರಾಟ ಮಳಿಗೆ ಹಾಕಿದ್ದರಿಂದ ಅಗ್ನಿ ಅವಘಡ ಸಂಭವಿಸಿದಲ್ಲಿ ಅದನ್ನು ತಡೆಗಟ್ಟಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ನಿಯಮ ಉಲ್ಲಂಘಿಸಿ ಹಲವೆಡೆ ಪಟಾಕಿ ಮಾರಾಟ
ರಾಜಾಜಿನಗರದ ರಾಮಮಂದಿರ ಸಮೀಪದ ಮೈದಾನದಲ್ಲಿ ದಾಳಿ ನಡೆಸಿದ ಕೆಎಸ್ಪಿಸಿಬಿಯ ಪರಿಸರ ಅಧಿಕಾರಿ ಕೆ.ಎಂ. ರಮೇಶ್ ‘ವಿಜಯವಾಣಿ’ ಜತೆ ಮಾತನಾಡಿ, ನಗರದೆಲ್ಲೆಡೆ ಹೆಚ್ಚಿನ ಮಳಿಗೆಗಳಲ್ಲಿ ನಿಯಮ ಉಲ್ಲಂಘಿಸಿ ನೀರಿ ಹಾಗೂ ಪೆಸೊ ಲೋಗೋ ಇಲ್ಲದ ಪಟಾಕಿಗಳನ್ನೂ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇಂಥವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು. ಪಟಾಕಿಗಳ ಪ್ಯಾಕ್ಗಳ ಮೇಲಿರುವ ನೀರಿ ಹಾಗೂ ಪೆಸೊ ವಿಶಿಷ್ಟ ಹಸಿರು ಬಣ್ಣದ ಲೋಗೋ ಹಾಗೂ ಕ್ಯೂಆರ್ ಕೋಡ್ಗಳ ಮೂಲಕ ಹಸಿರು ಪಟಾಕಿಗಳನ್ನು ಗ್ರಾಹಕರು ಗುರುತಿಸಬಹುದು ಎಂದು ಮಾಹಿತಿ ನೀಡಿದರು.
ಪಟಾಕಿ ಮಾರಾಟಕ್ಕೆ ತಡವಾಗಿ ಪರವಾನಗಿ ದೊರೆತಿರುವುದು ಸ್ವಲ್ಪ ಸಮಸ್ಯೆಯಾಗಿದೆ. ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಾಗಿದೆ. | ಉದಯ್ಕುಮಾರ್ ಪಟಾಕಿ ವ್ಯಾಪಾರಿ, ಮಲ್ಲೇಶ್ವರ ಪ್ರತಿ ಬಾರಿಯಂತೆ ಪಟಾಕಿ ಖರೀದಿಸುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಜತೆಗೆ ಪಟಾಕಿಯ ಪ್ರಮಾಣವೂ ಕಡಿಮೆಯಾಗಿದೆ. | ಮಹಾಂತೇಶ್ ಉದ್ಯಮಿ ಈ ಬಾರಿ ವಿವಿಧ ಬಗೆ ಬಗೆಯ ಪಟಾಕಿಗಳ ಸಂಗ್ರಹವಿಲ್ಲ. ಹೀಗಾಗಿ ಕಡಿಮೆ ಪಟಾಕಿ ಖರೀದಿಸಿದ್ದೇವೆ. ಹಸಿರು ಪಟಾಕಿಯನ್ನೇ ಖರೀದಿಸಿದ್ದೇವೆ. | ತನುಜಾ ಖಾಸಗಿ ಕಂಪನಿ ಉದ್ಯೋಗಿ ಹಲವು ವರ್ಷಗಳಿಂದ ಪಟಾಕಿ ಮಾರಾಟದಲ್ಲಿ ತೊಡಗಿದ್ದೇನೆ. ಗ್ರಾಹಕರಿಂದ ಇಷ್ಟೊಂದು ನೀರಸ ಪ್ರತಿಕ್ರಿಯೆ ಎಂದೂ ಕಂಡಿರಲಿಲ್ಲ. | ಚಂದ್ರಶೇಖರ್ ಪಟಾಕಿ ಮಳಿಗೆ ಮಾಲೀಕ, ಮಲ್ಲೇಶ್ವರ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ನಮ್ಮಲ್ಲಿ ಹಸಿರು ಪಟಾಕಿಗಳನ್ನೇ ಮಾರಾಟ ಮಾಡಲಾಗುತ್ತದೆ. | ಪದ್ಮಾ ಪಟಾಕಿ ಮಳಿಗೆ ಮಾಲಕಿ ಮಕ್ಕಳಿಗಾಗಿ ಈ ಬಾರಿಯೂ ಹಲವಾರು ಪಟಾಕಿಗಳನ್ನು ಖರೀದಿ ಸಿದ್ದೇವೆ. ಹಸಿರು ಪಟಾಕಿ ಮಾರುಕಟ್ಟೆಗೆ ಬಂದಿರುವುದು ಸ್ವಾಗತಾರ್ಹ. | ಶ್ರೀನಿವಾಸ್ ಉದ್ಯಮಿ