

ಸುಂಟಿಕೊಪ್ಪ: ಇಲ್ಲಿನ ಜನತಾ ಕಾಲನಿ ಸಮೀಪ ಪಂಚಾಯಿತಿ ಅಧೀನದಲ್ಲಿರುವ ಕೋಳಿ,ಮೀನು ಮಾಂಸ ಮಾರಾಟ ಮಳಿಗೆಯಲ್ಲಿ ಸಂಗ್ರಹಗೊಂಡ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿಗೊಳಿಸದ ಪರಿಣಾಮ ಅಶುಚಿತ್ವ ತಾಂಡವವಾಡುತ್ತಿದ್ದು, ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ.
ಸಂತೆ ದಿನವಾದ ಭಾನುವಾರ ಮಾರುಕಟ್ಟೆಯಲ್ಲಿ ಮೀನು, ಮಾಂಸ ವ್ಯಾಪಾರ ನಡೆಯಲಿದ್ದು, ಅಂದು ಸಂಗ್ರಹವಾಗುವ ತ್ಯಾಜ್ಯವನ್ನು ಅಲ್ಲಿಯೇ ಬಿಟ್ಟು ಹೋಗಿರುವುದರಿಂದ ಮತ್ತು ರಸ್ತೆ ಬದಿಯ ಮಾಂಸದ ಅಂಗಡಿಯವರು ಅಲ್ಲೇ ತ್ಯಾಜ್ಯ ಹಾಕುತ್ತಿರುವುದರಿಂದ ದುರುವಾಸನೆ ಬೀರುತ್ತಿದೆ.
ಇಲ್ಲಿನ ಗ್ರಾಮ ಪಂಚಾಯಿತಿ ಕಸವಿಲೇವಾರಿ ಮಾಡದಿರುವ ಪರಿಣಾಮ ಸೋಮವಾರ ಸುತ್ತಮುತ್ತಲಿನ ವಾತಾವರಣ ಗಬ್ಬೆದು ನಾರುತ್ತಿತ್ತು. ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರು ಮೂಗು ಮುಚ್ಚಿ ವ್ಯಾಪಾರ ವಹಿವಾಟು ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಕ್ಕಪಕ್ಕದವರ ಒತ್ತಾಯದ ಮೇರೆಗೆ ಪೌರಕಾರ್ಮಿಕರು ಟ್ರಾೃಕ್ಟರ್ ಮೂಲಕ ಅಲ್ಲಿದ್ದ ತ್ಯಾಜ್ಯವನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಅಲ್ಲೇ ಉಳಿದ ಕೋಳಿ, ಮೀನಿನ ರಕ್ತ ಹಾಗೂ ಇತರ ತ್ಯಾಜ್ಯಗಳಿಂದ ಹುಳುಗಳು ಮುತ್ತಿ ಸೊಳ್ಳೆಗಳು ಉತ್ಪಾತಿಯಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಈ ಭಾಗದಲ್ಲಿ 10 ಕ್ಕೂ ಹೆಚ್ಚು ವಾಸದ ಮನೆಗಳಿದ್ದು, ಹಲವಾರು ಅಂಗಡಿಗಳು ಕೂಡ ಇವೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿ ರೋಗದ ಭೀತಿ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ಬಗ್ಗೆ ಕ್ರಮ ವಹಿಸುವಂತೆ ಸ್ಥಳೀಯ ಅಂಗಡಿ ಮಾಲೀಕರು, ನಿವಾಸಿಗಳು ಮನವಿ ಮಾಡಿದ್ದಾರೆ.