

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿದ್ದು ಕಡೆಗೂ ಜಿಲ್ಲೆಯಲ್ಲಿ ಮಾಲಿನ್ಯ ನಿಯಂತ್ರಣ ಕಚೇರಿ ಉದ್ಘಾಟನೆಯಾಗಿದೆ.
ದೊಡ್ಡಬಳ್ಳಾಪುರದ ಹಲವು ಸಂಘಟನೆಗಳ ಹಲವು ಹೋರಾಟ, ಪ್ರತಿಭಟನೆಗಳ ಲವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ದೊಡ್ಡಬಳ್ಳಾಪುರ ತಾಲೂಕು ಕೇಂದ್ರದಲ್ಲಿ ಗುರುವಾರ ಕಾರ್ಯಾರಂಭವಾಗಿದೆ. ನಗರದ ಟಿ.ಬಿ.ಸರ್ಕಲ್ ನಲ್ಲಿರುವ ಲೋಕೋಪಯೋಗಿ ಕಟ್ಟಡದ ಬಾಡಿಗೆ ಕಟ್ಟಡದಲ್ಲಿ ಸಿಬ್ಬಂದಿ ಪೂಜೆ ಸಲ್ಲಿಸುವ ಮೂಲಕ ಕಚೇರಿ ಕಾರ್ಯಾರಂಭಕ್ಕೆ ಚಾಲನೆ ನೀಡಿದ್ದಾರೆ.
ದೊಡ್ಡಬಳ್ಳಾಪುರದ ರೈತಸಂಘಟನೆ, ಅರ್ಕಾವತಿ ನದಿ ಹೋರಾಟ ಸಮಿತಿ, ಯುವ ಸಂಚಲನ ತಂಡ ಸೇರಿ ಹಲವು ಪ್ರಗತಿಪರ ಸಂಘಟನೆಗಳು ಬೆಂಗಳೂರಿನಲ್ಲಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಮಾಡುವಂತೆ ಒತ್ತಡ ಹೇರಿದ್ದವು. ಈ ಹಿಂದಿನ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಾಕಷ್ಟು ಶ್ರಮವಹಿಸಿದ್ದರೂ ಅನೇಕ ಕಾರಣಗಳಿಂದ ಕಾಲ ಕೂಡಿಬಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಕಡೆಗೂ ಕಚೇರಿ ಸ್ಥಳಾಂತರಿಸುವ ಮೂಲಕ ಸಂಘಟನೆಗಳ ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ.
ಕೈಗಾರಿಕೆಗಳು ಅಲರ್ಟ್: ದೊಡ್ಡಬಳ್ಳಾಪುರ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಸಾಕಷ್ಟು ಕೈಗಾರಿಕೆಗಳಿಂದ ರಾಸಾಯನಿಕಮಿಶ್ರಿತ ತ್ಯಾಜ್ಯ ನೀರು ಕಾಲುವೆಗಳ ಮೂಲಕ ಕೆರೆಕುಂಟೆ ಸೇರಿ ಜಲಮೂಲಗಳಿಗೆ ಸೇರುತ್ತಿರುವ ಬಗ್ಗೆ ಸಾಕಷ್ಟು ಭಾರಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಭಾಗದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಇಲ್ಲದ ಕಾರಣ ಕೈಗಾರಿಕೆಗಳಿಗೆ ಅಂಕುಶವಿಲ್ಲದಂತಾಗಿದೆ ಎಂದು ದೂರಿದ್ದರು. ಹಲವು ಅರಣ್ಯ ಪ್ರದೇಶಗಳಲ್ಲಿ ರಾಸಾಯನಿಕಗಳನ್ನು ತಂದು ಸುರಿದು ಹೋಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು ತಹಸೀಲ್ದಾರ್ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರೂ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಪ್ರಸ್ತುತ ಕಚೇರಿ ಉದ್ಘಾಟನೆಗೊಂಡಿದ್ದು ಶೀಘ್ರ ಅಧಿಕಾರಿಗಳು ಕರ್ತವ್ಯ ಆರಂಭಿಸಿದರೆ ಇವೆಲ್ಲ ಕೃತ್ಯಗಳಿಗೆ ಬ್ರೇಕ್ ಬೀಳಲಿವೆ, ಕೈಗಾರಿಕೆಗಳ ಆಡಳಿತ ಮಂಡಳಿಗಳು ಅಲರ್ಟ್ ಆಗಲಿವೆ ಎಂಬ ನಿರೀಕ್ಷೆ ಮೂಡಿಸಿದೆ.
ಪ್ರತಿಕೃತಿಗೆ ಪೂಜೆ: ಕೆಲವು ದಿನಗಳ ಹಿಂದೆ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕತುಮಕೂರು ಕೆರೆ ದಂಡೆಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳ ಪ್ರತಿಕೃತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಘಟನೆಗಳು ವಿನೂತನ ಪ್ರತಿಭಟನೆ ನಡೆಸಿದ್ದರು. ದಯಮಾಡಿ ಇಲ್ಲಿ ಕಚೇರಿ ತೆರೆಯಿರಿ ಜಲಮೂಲಗಳನ್ನು ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೂ ಮೊದಲು ಬಾಯಿಗೆ ಕಪ್ಪುಪಟ್ಟಿ ಧರಿಸಿ ಮೌನಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲಾಡಳಿತ ಭವನ ಆವರಣದಲ್ಲಿ ಉರುಳು ಸೇವೆ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ನಡೆದಿತ್ತು. ಸ್ವಾತಂತ್ರ್ಯ ದಿನದಂದು ತೆಪ್ಪದಲ್ಲಿ ಕುಳಿತು ಇಲಾಖೆಯ ಗಮನ ಸೆಳೆಯುವ ಪ್ರಯತ್ನವಾಗಿತ್ತು ಇಂತ ಹಲವು ಪ್ರತಿಭಟನೆಗಳ ಲವಾಗಿ ಕಡೆಗೂ ಜಿಲ್ಲೆಗೆ ಕಚೇರಿ ಕಾಲಿಟ್ಟಿದೆ.
ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿದೆ, ಇಲಾಖೆ ಕಾರ್ಯದರ್ಶಿಯವರೊಂದಿಗೆ ಮಾತನಾಡಿ ಕಚೇರಿ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಅಧಿಕಾರಿಗಳು ಕರ್ತವ್ಯ ಆರಂಭಿಸಲಿದ್ದಾರೆ, ಲ್ಯಾಬ್ ಮತ್ತಿತರ ಪರಿಕರಗಳ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುವುದು, ಅಪರೆಲ್ ಪಾರ್ಕ್‌ನಲ್ಲಿ ಸ್ವಂತ ಕಟ್ಟಡ ನಿರ್ಮಾಣವೂ ಆಗಲಿದೆ, ಇದರ ಜತೆಗೆ ಆಯುಷ್ ಇಲಾಖೆಯೂ ಬೆಂಗಳೂರಿನಿಂದ ಸ್ಥಳಾಂತರಗೊಳ್ಳಲಿದೆ.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ
-----
ಸಾಕಷ್ಟು ಹೋರಾಟ ಪ್ರತಿಭಟನೆ ನಂತರ ಕಡೆಗೂ ಕಚೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಗೊಂಡಿರುವುದು ಸಂತಸ ತಂದಿದೆ ಇದಕ್ಕೆ ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಹೇಳಬೇಕು, ಆದರೆ ಇದು ಕೇವಲ ಕಟ್ಟಡ ಉದ್ಘಾಟನೆಗೆ ಸೀಮಿತವಾಗಬಾರದು, ಶೀಘ್ರದಲ್ಲೇ ಅಧಿಕಾರಿ, ಸಿಬ್ಬಂದಿ ಕರ್ತವ್ಯ ಆರಂಭಿಸುವ ಮೂಲಕ ಈ ಭಾಗದ ಜಲಮೂಲಗಳ ರಕ್ಷಣೆಗೆ ಮುಂದಾಗಬೇಕು.
ವಸಂತ್, ರೈತ ಸಂಘ, ದೊಡ್ಡಬಳ್ಳಾಪುರ