ಕಲುಷಿತ ನೀರಿನ ಬಗ್ಗೆ ಎಚ್ಚರವಿರಲಿ

05-DVD-1
ದೇವದುರ್ಗ ತಾಪಂ ಸಭಾಂಗಣದಲ್ಲಿ ಗ್ರಾಪಂ ಮಟ್ಟದ ಪ್ರಗತಿ ಪರಿಶೀಲನೆ ಸಭೆ ಜರುಗಿತು. ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ತಾಪಂ ಇಒ ಬಸವರಾಜ್ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣರಾವ್, ಜಿಪಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೀರಾಲಾಲ್, ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಇದ್ದರು.
Published on

ದೇವದುರ್ಗ: ಹಳ್ಳಿಗಳಲ್ಲಿನ ಕುಡಿವ ನೀರಿನ ಸಮಸ್ಯೆಯನ್ನು ನಿರ್ಲಕ್ಷೃ ಮಾಡದೆ ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಪರಿಹರಿಸಲು ಮುಂದಾಗಬೇಕು ಎಂದು ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ ಅಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಪಂಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಮಳೆಗಾಲ ಆರಂಭವಾಗಿದ್ದರೂ ಹಲವು ಕಡೆ ಕುಡಿವ ನೀರಿನ ಸಮಸ್ಯೆ ತಲೆದೂರಿದೆ. ವಾರಕ್ಕೊಮ್ಮೆ ಜಲ ಮೂಲಗಳನ್ನು ಪರಿಶೀಲಿಸಬೇಕು. ಕಲುಷಿತ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೆಚ್ಚುವರಿ ನೀರಿನ ಮೂಲಗಳನ್ನು ಪರಿಶೀಲಿಸಿ ಅಗತ್ಯ ಇರುವ ಕಡೆ ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಗ್ರಾಪಂಯಲ್ಲಿ ಕೈಗೊಳ್ಳುವ ಪ್ರತಿಯೊಂದು ಯೋಜನೆಗಳ ದಾಖಲೆಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಮಳೆ ಕೊರತೆಯಿದ್ದು ಜನರು ಕೆಲಸವಿಲ್ಲದೆ ಗುಳೆ ಹೋಗದಂತೆ ತಡೆಯಲು ಎಲ್ಲ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು.

ಅರ್ಜಿ ಸಲ್ಲಿಸಿದ ಅರ್ಹರಿಗೆ ವಿಳಂಬ ಮಾಡದೆ ಕೆಲಸ ನೀಡಿ ಕೂಲಿಪಾವತಿ ಮಾಡಬೇಕು. ಮಳೆಗಾಲ ಆರಂಭವಾಗಿರುವ ಕಾರಣ ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಟ್ಟು ಹೋಗಬಾರದು. ಎಲ್ಲ ಗ್ರಾಪಂಗಳಲ್ಲಿ ಇ ಹಾಜರಾತಿ ಕಡ್ಡಾಯ. ನಿಯಮ ಪ್ರಕಾರ ಕರವಸೂಲಿ ಮಾಡಿ. ಶುದ್ಧ ಕುಡಿವ ನೀರಿನ ಘಟಕಗಳು ನಿರ್ವಹಣೆ ಮಾಡುವ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಯಾವುದೇ ಕೆಲಸದ ಖಾತ್ರಿ ಬಗ್ಗೆ ಜಿಪಿಎಸ್ ಫೋಟೋ ಸಂಗ್ರಹಿಸಿ ದಾಖಲೆ ಇರಿಸಿಕೊಳ್ಳಬೇಕು. ಸ್ಥಳೀಯ ಗ್ರಾಪಂ ಗ್ರಂಥಾಲಯಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.

ತಾಪಂ ಇಒ ಬಸವರಾಜ್ ಹಟ್ಟಿ, ಸಹಾಯಕ ನಿರ್ದೇಶಕ ಅಣ್ಣರಾವ್, ಜಿಪಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೀರಾಲಾಲ್, ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net