

ಆನೇಕಲ್: ಮುತ್ತಾನಲ್ಲೂರು ಅಮಾನಿಕೆರೆ ಕಲುಷಿತಗೊಂಡು ಸುತ್ತಮುತ್ತಲಿನ ಪರಿಸರ ಗಬ್ಬು ನಾರುತ್ತಿರುವ ಹಿನ್ನೆಲೆಯಲ್ಲಿ ಮುತ್ತಾನಲ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಪರಿಸರ ಪ್ರೇಮಿಗಳು ಶನಿವಾರ ಮುತ್ತಾನಲ್ಲೂರು ಗ್ರಾಪಂನಿಂದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬೆಳಗ್ಗೆ 10 ಗಂಟೆಗೆ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಲಾಯಿತು. ನಾರಾಯಣಟ್ಟ, ರಾಮಸಾಗರ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಚಂದಾಪುರ ಪುರಸಭೆ ಎದುರು ಜಮಾಯಿಸಿದರು. ಚಂದಾಪುರ ಚೋಳರ ಕೆರೆಯಿಂದ ಹರಿಯುತ್ತಿರುವ ಕಲುಷಿತ ನೀರು ಶುದ್ಧೀಕರಿಸಿ ಮುತ್ತಾನಲ್ಲೂರು ಕೆರೆಗೆ ಹರಿಸಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ಪ್ರದಿಪ ಅವರಿಗೆ ಮನವಿ ಸಲ್ಲಿಸಿದರು.
ಹಾಗೆಯೇ 10 ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಚಂದಾಪುರ ಪುರಸಭೆ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಚಂದಾಪುರ&ಹೊಸೂರು ಹೆದ್ದಾರಿ ಮೂಲಕ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ಬಳಿ ಆಸ್ಪತ್ರೆ ಆಡಳಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಆಸ್ಪತ್ರೆಯ ಕಲುಷಿತ ನೀರನ್ನು ರಾಜಕಾಲುವೆ ಮೂಲಕ ಕೆರೆಗಳಿಗೆ ಹರಿಬಿಡಬಾರದು, ಈಗಾಗಲೇ ಮುತ್ತಾನಲ್ಲೂರು ಕೆರೆಗೆ ಕಲುಷಿತ ನೀರನ್ನು ಆಸ್ಪತ್ರೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಕೆರೆ ಅಭಿವೃದ್ಧಿ ಮಾಡಲು ಸಿಎಸ್ಆರ್ ಯೋಜನೆಯಡಿ ಸಹಕಾರ ನೀಡುವಂತೆ ಮನವಿ ಸಲ್ಲಿಸಲಾಯಿತು. ನಾರಾಯಣ ಹೆಲ್ತ್ ಸಿಟಿ ಹಾಗೂ ಸ್ಪರ್ಶ್ ಆಸ್ಪತ್ರೆ ಬಳಿ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಬಳಿಕ ಬೊಮ್ಮಸಂದ್ರ ಪುರಸಭೆ ಎದುರು ಪ್ರತಿಭಟನೆ ನಡೆಸಿದ ಹೋರಾಟಗಾರರು, ಬೊಮ್ಮಸಂದ್ರ ಪುರಸಭೆ ಸುತ್ತಮುತ್ತಲಿನ ಕೊಳಚೆ ನೀರು ರಾಜಕಾಲುವೆ ಮೂಲಕ ಮುತ್ತಾನಲ್ಲೂರು ಕೆರೆ ಸೇರುತ್ತಿದೆ. ಮುಂದೆ ಈ ರೀತಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿ ಸಲ್ಲಿಸಿದರು.
ಬಳಿಕ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಅಸೋಸಿಯೇಷನ್ ಕಚೇರಿಗೆ ತೆರಳಿ ಕೈಗಾರಿಕಾ ಪ್ರದೇಶದ ಕೊಳಚೆ ನೀರು ಕೆರೆಗೆ ಹರಿಬಿಡದಂತೆ ಮನವಿ ಪತ್ರ ಸಲ್ಲಿಸಲಾಯಿತು.
ಕೆರೆ ಅಭಿವೃದ್ಧಿಗೆ ಸಹಕಾರ: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಕೊಳಚೆ ನೀರನ್ನು ಕೆರೆಗಳಿಗೆ ಹರಿಬಿಡದಂತೆ ತಡೆಯುವ ನಿಟ್ಟಿನಲ್ಲಿ ಇನ್ನೆರಡು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ವಾರದಲ್ಲಿ ಮುತ್ತಾನಲ್ಲೂರು ಕೆರೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೆರೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಬೊಮ್ಮಸಂದ್ರ ಕೈಗಾರಿಕಾ ಸಂದ ಅಧ್ಯಕ್ಷ ಎ.ಪ್ರಸಾದ್ ಭರವಸೆ ನೀಡಿದರು.
11 ಕಿಮೀ ಜಾಥಾ: ಮುತ್ತಾನಲ್ಲೂರು ಗ್ರಾಪಂನಿಂದ ಹೊರಟ ಪ್ರತಿಭಟನಾ ಮೆರವಣಿಗೆ 11 ಕಿಲೋಮೀಟರ್ ದೂರದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದವರೆಗೂ ನಡೆಯಿತು. ಸಾವಿರಾರು ಹೋರಾಟಗಾರರು ಜಾಥಾದಲ್ಲಿ ಭಾಗವಹಿಸಿದ್ದರಿಂದ ದೊಮ್ಮಸಂದ್ರ ಹಾಗೂ ಚಂದಾಪುರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಹಿತಕರ ಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿತ್ತು.
ಮಿತಿ ಮೀರಿದ ಕೊಳಚೆ: ಮುತ್ತಾನಲ್ಲೂರು ಅಮಾನಿಕೆರೆ ಒಂದು ಕಾಲದಲ್ಲಿ ಆನೇಕಲ್ ತಾಲೂಕಿನ ಹಲವಾರು ಹಳ್ಳಿಗಳಿಗೆ ಕುಡಿಯಲು ನೀರು ಉಣಿಸುತ್ತಿತ್ತು. ಆದರೆ ಇತ್ತೀಚೆಗೆ ಬೆಳ್ಳಂದೂರು ಕೆರೆಯನ್ನು ಮೀರಿಸುವಂತೆ ಕೆರೆ ಕಲುಷಿತಗೊಂಡಿದೆ. ಗ್ರಾಮದ ಜನರೆಲ್ಲ ಎಚ್ಚೆತ್ತು ಬೃಹತ್ ಹೋರಾಟಕ್ಕೆ ಮುಂದಾಗಿದ್ದೇವೆ. ಮಾಲಿನ್ಯ ಮಂಡಳಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭರವಸೆ ಇದೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸತ ಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ ತಿಳಿಸಿದರು.
ಮೀನುಗಳ ಮಾರಣಹೋಮ: ಬೆಳ್ಳಂದೂರು ಕೆರೆ ಮಾದರಿಯಲ್ಲೇ ಮುತ್ತಾನಲ್ಲೂರು ಕೆರೆಯಿಂದ ನೂರೆ ಉಕ್ಕುತ್ತಿದೆ. ಪ್ರತಿದಿನ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ ಆಗುತ್ತಿದೆ. ಈ ಭಾಗದಲ್ಲಿ ವಾಸ ಮಾಡಲು ಸಾಧ್ಯ ಆಗದ ಸ್ಥಿತಿ ನಿರ್ಮಾಣವಾಗಿದೆ. 15 ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮುತ್ತಾನಲ್ಲೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ್ರೆಡ್ಡಿ ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ಕೇಶವರೆಡ್ಡಿ, ಸುಜಾತಾ, ತಾಪಂ ಮಾಜಿ ಸದಸ್ಯರಾದ ಪುಷ್ಪಮ್ಮ, ಪುಷ್ಪರಾಜು, ಸದಸ್ಯರಾದ ಮೋಹನ್ ಬಾಬು, ಜಯರಾಮ್ ಸರ್ಜಾ, ಗೌರೀಶ್, ದಶರತ್, ಕಾಂತರಾಜು, ಮುಖಂಡರಾದ ರಾಮಸಾಗರ ಮಂಜುನಾಥ್, ಮುತ್ತಾನಲ್ಲೂರು ನವೀನ್, ರಾಧಮ್ಮ, ಜಯಮ್ಮ, ನಾಗವೇಣಿ, ಹೀಲಲಿಗೆ ಕೃಷ್ಣಾರೆಡ್ಡಿ, ಬೊಮ್ಮಸಂದ್ರ ಶ್ರೀನಿವಾಸ್ ರೆಡ್ಡಿ, ಸುಧಾಕರ್, ಕೃಷ್ಣಾರೆಡ್ಡಿ, ಮುನಿರೆಡ್ಡಿ, ನಾಗರಾಜ ರೆಡ್ಡಿ ಮರಿ, ಕೃಷ್ಣಾರೆಡ್ಡಿ, ಸತೀಶ್, ಮೇಜರ್ ವೇಣುಗೋಪಾಲ್, ರುರಾಮರೆಡ್ಡಿ, ಜಗನ್ನಾಥ್ ರೆಡ್ಡಿ ಮತ್ತಿತರರು ಇದ್ದರು.