

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೆಚ್ಚುತ್ತಿರುವ ಕಲುಷಿತ ವಾತಾವರಣದಿಂದ ಮೀನುಗಳು ಸಾವಿಗಾಡುತ್ತಿದ್ದು, ಕೆರೆಯ ಸುತ್ತಮುತ್ತಲಿನ ವಾತಾ ವರಣ ಗಬ್ಬೆದ್ದು ನಾರುತ್ತಿದೆ.
ಪಡುವಾರಹಳ್ಳಿ ಭಾಗದಲ್ಲಿ ಕೆಲವು ಮೀನುಗಳು ಮೃತಪಟ್ಟು ತೇಲುತ್ತಿದ್ದು, ದುರ್ವಾಸನೆ ಬೀರಲು ಪ್ರಾರಂಭವಾಗಿದೆ. ಕೆರೆಗೆ ಪ್ರತಿನಿತ್ಯ ಜನರು ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಆದರೆ, ದುರ್ವಾಸನೆಯಿಂದ ಜನರು ಮೂಗುಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ಇದೆ.
ಬೇಸಿಗೆ ಪ್ರಾರಂಭವಾಗುವ ಮುನ್ನವೇ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಕೆರೆಯಲ್ಲಿ ನೀರಿನ ಪ್ರಮಾಣ ದಿನೇ ದಿನೆ ಇಳಿಕೆಯಾಗುತ್ತಿದೆ. ಇದರೊಂದಿಗೆ ಕಲುಷಿತ ನೀರು ಆಗಿಂದಾಗೆ ಕೆರೆಗೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೀನುಗಳು ಸಾವಿಗೀಡಾ ಗುತ್ತಿವೆ.
‘ಕೆರೆಯಲ್ಲಿ ಪೊಟಾಷ್ ಅಂಶ ಹಾಗೂ ಹಸಿರುನೀಲಿ ಪಾಚಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿ ಮೀನುಗಳು ಮೃತಪಡುತ್ತಿವೆ. ಕೆರೆಯಲ್ಲಿರುವ ಹಸಿರುನೀಲಿ ಪಾಚಿಯನ್ನು ತೆರವುಗೊಳಿಸಬೇಕಾಗಿದೆ. ಇದರ ಜತೆಗೆ ಬೆಳೆದಿರುವ ಹಯಸಿಂತ್ ಅನ್ನು ತೆರವುಗೊಳಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕೆ ಬೋಟ್‌ನ ಅವಶ್ಯಕತೆ ಇದ್ದು, ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡ ಮೇರೆಗೆ ಜಿಲ್ಲಾಡಳಿತ 3.50 ಲಕ್ಷ ರೂ.ಗಳಲ್ಲಿ ಎರಡು ಬೋಟ್ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದು, ಒಂದೆರಡು ದಿನಗಳ ಒಳಗೆ ಬೋಟ್ ಬರುವ ನಿರೀಕ್ಷೆ ಇದೆ. ಕೆರೆಯಲ್ಲಿರುವ ಹಸಿರುನೀಲಿ ಪಾಚಿ ಹಾಗೂ ಹಯಸಿಂತ್ ಅನ್ನು ತೆರವುಗೊಳಿಸಿದರೆ ಕೆರೆ ಶುದ್ಧಗೊಳ್ಳುತ್ತದೆ’ ಎಂದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಾಜಿ ಸದಸ್ಯ ಕೆರೆ ಜಯರಾಮಯ್ಯ ‘ವಿಜಯವಾಣಿ’ಗೆ ತಿಳಿಸಿದರು.
ಕೆರೆಗೆ ಈ ಹಿಂದೆ ಪಡುವಾರಹಳ್ಳಿ ಭಾಗದಿಂದ ದೊಡ್ಡ ಪ್ರಮಾಣದಲ್ಲಿ ಯುಜಿಡಿ ನೀರು ಸೇರುತಿತ್ತು. ಹೊಸ ಯುಜಿಡಿ ಮಾರ್ಗ ನಿರ್ಮಾಣವಾದ ನಂತರ ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿರುವುದು ಸಂಪೂರ್ಣ ನಿಂತಿದೆ. ಆದರೆ, ಕೆಲವೊಮ್ಮೆ ಯುಜಿಡಿ ಮಾರ್ಗದಲ್ಲಿ ಸೋರಿಕೆ ಉಂಟಾಗಿ ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿದೆಯೇ ಹೊರತು ಪ್ರತಿನಿತ್ಯ ಕಲುಷಿತ ನೀರು ಕೆರೆಗೆ ಸೇರುತ್ತಿಲ್ಲ. ಕೆರೆಗೆ ವಾಣಿವಿಲಾಸ ನೀರು ಸರಬರಾಜು ಕೇಂದ್ರದಿಂದ ಪ್ರತಿನಿತ್ಯ 10 ಲಕ್ಷ ಲೀಟರ್ ಶುದ್ಧ ನೀರು ಸೇರುತ್ತಿದೆ. ಹೀಗಾಗಿ ಕೆರೆ ಬರಿದಾಗುವ ಹಾಗೂ ಕಲುಷಿತ ನೀರಿನ ಪ್ರಮಾಣ ಹೆಚ್ಚಾಗುವ ಆತಂಕ ಇಲ್ಲ. ಕೆರೆಯಲ್ಲಿರುವ ಹಸಿರುನೀಲಿ ಪಾಚಿ ಹಾಗೂ ಹಯಸಿಂತ್ ಅನ್ನು ತೆರವುಗೊಳಿಸಿದರೆ ಕೆರೆ ಶುದ್ಧಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆರೆಗೆ ಈ ಬಾರಿ ಸಾಕಷ್ಟು ಸಂಖ್ಯೆಯಲ್ಲಿ ವಲಸೆ ಹಕ್ಕಿಗಳು ಬಂದಿದ್ದು, ಕೆರೆಯಲ್ಲಿ ಮೀನುಗಳು ಸಾವಿಗಾಡುತ್ತಿರುವುದು ಹಾಗೂ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಳ್ಳುತ್ತಿರುವುದು ವಲಸೆ ಹಕ್ಕಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕಲುಷಿತಗೊಂಡಿರುವ ಕೆರೆಯನ್ನು ಶುದ್ಧೀಕರಿಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ.