

ಚಿಕ್ಕಮಗಳೂರು: ಮಲೆನಾಡಿನ ಕಾಫಿ ತೋಟಗಳ ಮಧ್ಯದ ಮತಗಟ್ಟೆಗಳಲ್ಲಿ ಮಾಗಿ ಚಳಿಯ ನಡುವೆಯೇ ಬೆಳಗ್ಗೆ ಸಾಲುಗಟ್ಟಿ ನಿಂತ ತೋಟದ ಕಾರ್ವಿುಕರು ಹಾಗೂ ಇತರ ಮತದಾರರು ಹಕ್ಕು ಚಲಾಯಿಸಿದರು.
ತಾಲೂಕಿನ ಅಲ್ಲಂಪುರ, ಕೈಮರ, ದಾಸರಹಳ್ಳಿ, ಎನ್ಎಂಡಿಸಿ, ಮಲ್ಲೇನಹಳ್ಳಿ, ಹೊಸಪೇಟೆ ಸೇರಿ ವಿವಿಧ ಮತಗಟ್ಟೆಗಳಲ್ಲಿ ಕೊರೆಯುತ್ತಿದ್ದ ಚಳಿಯಲ್ಲಿ ಕೈಗವಸು, ಮಂಕಿಟೋಪಿ, ಜರ್ಕಿನ್, ಸ್ವೆಟರ್, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಚ್ಚನೆ ಉಡುಪಿನೊಂದಿಗೆ ಆಗಮಿಸಿ ಶ್ರಮಿಕ ವರ್ಗದವರು ಮೊದಲು ಮತದಾನ ಮಾಡಿದರು.
ಮಾಸ್ಕ್ ಹಾಕಿಕೊಂಡು ಮತದಾನ ಕೇಂದ್ರಗಳಿಗೆ ಆಗಮಿಸಿದ ಗ್ರಾಮಸ್ಥರಿಗೆ ದಾಸರಹಳ್ಳಿ ಕೇಂದ್ರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಿದರು. ಕೆಲವರು ಹಸುಗೂಸುಗಳನ್ನು ಕರೆದುಕೊಂಡು ಆಗಮಿಸಿದಾಗ ಆಶಾ ಕಾರ್ಯಕರ್ತೆ ತಾರಾಕೃಷ್ಣ ಹಾಗೂ ಪೊಲೀಸ್ ಪೇದೆ ಮಗು ಎತ್ತಿಕೊಂಡು ಮತದಾನಕ್ಕೆ ಸಹಕರಿಸಿದ್ದು ಕಂಡುಬಂತು. 78 ವರ್ಷದ ವೃದ್ಧೆ ಮಹಿಳೆಯ ಸಹಕಾರದಲ್ಲಿ ಹಕ್ಕು ಚಲಾಯಿಸಿದರು.
ಅಭ್ಯರ್ಥಿಗಳು, ಮತದಾರರು ಮತದಾನ ಮಾಡಿದ ನಂತರ ಬೆರಳು ಗುರುತು ತೋರ್ಪಡಿಸಿ ಮೊಬೈಲ್ನಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಅಲ್ಲಲ್ಲಿ ಮದ್ಯದ ನಶೆಯಲ್ಲಿದ್ದ ಕೆಲವರು ಕಿರಿಕಿರಿ ಮಾಡುತ್ತಿದ್ದಾಗ ಪೊಲೀಸರು ಲಾಠಿ ರುಚಿ ತೋರಿಸಿ ಮನೆಗೆ ಕಳಿಸಿದರು.