

ಬ್ಯಾಡಗಿ: ತಾಲೂಕಿನ 18 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭಾನುವಾರ ಮತದಾನ ಶಾಂತಿಯುತವಾಗಿ ಜರುಗಿತು.
ಬೆಳಗ್ಗೆ 7.30ರಿಂದ ಆರಂಭವಾದ ಮತದಾನ ಚಳಿಯ ವಾತಾವರಣದಿಂದ ತುಸು ನಿಧಾನವಾಗಿ ಸಾಗಿತು. ಬೆಳಗ್ಗೆ ಶೇ. 7.5, 11 ಗಂಟೆಗೆ ಶೇ. 21.15, ಮಧ್ಯಾಹ್ನ 1 ಗಂಟೆಗೆ ಶೇ. 47.29, 3 ಗಂಟೆಗೆ ಶೇ. 63.56, 4.30ಕ್ಕೆ ಶೇ. 68.44, ಬಳಿಕ ಶೇ. 72ರಷ್ಟು ಮತದಾನವಾಯಿತು. 3 ಗಂಟೆಯ ನಂತರ ಸರದಿಯಲ್ಲಿ ಹೆಚ್ಚು ಜನ ಕಾಣಿಸಿಕೊಂಡರು.
ಗಣ್ಯರ ಮತದಾನ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಜಿ.ಪಂ. ಸದಸ್ಯೆ ಅನುಸೂಯಾ ಕುಳೇನೂರು ಮೋಟೆಬೆನ್ನೂರಿನಲ್ಲಿ ಮತದಾನ ಮಾಡಿದರು. ಜಿ.ಪಂ. ಸದಸ್ಯ ಮುನಾಫ್ ಎಲಿಗಾರ ಕಾಗಿನೆಲೆ, ಚಿಕ್ಕಬಾಸೂರು ಗ್ರಾಮದಲ್ಲಿ ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ಹಳೆಶಿಡೇನೂರು ಗ್ರಾಮ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಮಾಸಣಗಿಯಲ್ಲಿ ಮತದಾನ ಮಾಡಿದರು.
ಜಿಲ್ಲಾ ವೀಕ್ಷಕ ಭೇಟಿ: ಜಿಲ್ಲಾ ಚುನಾವಣೆ ವೀಕ್ಷಕ ಡಾ.ನಾಗೇಂದ್ರ ಹೊನ್ನಳ್ಳಿ ತಾಲೂಕಿನ ಅಂಗರಗಟ್ಟಿ ಸೇರಿದಂತೆ ವಿವಿಧ ಮತಗಟ್ಟೆಗೆ ಭೇಟಿ ನೀಡಿ, ಅಲ್ಲಿನ ಮತದಾನ ವ್ಯವಸ್ಥೆ, ಪರಸ್ಪರ ಅಂತರ, ಸಿಬ್ಬಂದಿ ಕಾರ್ಯ, ಸ್ಯಾನಿಟೈಸರ್ ಬಳಕೆ ಕುರಿತು ಮಾಹಿತಿ ಪಡೆದರು. ತಹಸೀಲ್ದಾರ್ ರವಿ ಕೊರವರ, ಮಹೇಶ ಮರೆಣ್ಣನವರ, ಸಿಬ್ಬಂದಿ ಎಸ್.ತಿಮ್ಮಾರೆಡ್ಡಿ, ಜಿ.ಎಚ್. ಛತ್ರದ, ಡಿ.ಬಿ. ಕುಸಗೂರು ಇದ್ದರು.