

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆ.27ರಂದು ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ 3 ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿಕೂಟಕ್ಕೆ ಒಂದು ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.
ರಾಜ್ಯ ವಿಧಾನಸಭೆಯ ಪಕ್ಷವಾರು ಬಲಾಬಲದ ಮೇಲೆ ಲೆಕ್ಕ ಹಾಕಿದಾಗ ಗೆಲುವಿಗೆ ಪ್ರತೀ ಅಭ್ಯರ್ಥಿಗೆ 45.8 ಮತಗಳ ಅಗತ್ಯವಿದೆ. ಕಾಂಗ್ರೆಸ್ನಲ್ಲಿ ಸ್ಪೀಕರ್ ಸೇರಿ 135 ಸದಸ್ಯರಿದ್ದಾರೆ. ಇಬ್ಬರು ಪಕ್ಷೇತರು ಹಾಗೂ ಸವೋದಯ ಕರ್ನಾಟಕ ಪಕ್ಷದ ಶಾಸಕರ ಬೆಂಬಲದೊಂದಿಗೆ 138 ಮತಗಳನ್ನು ಕಾಂಗ್ರೆಸ್ ಹೊಂದಿದೆ. ಬಿಜೆಪಿ 66, ಜೆಡಿಎಸ್ 19 ಹಾಗೂ ಕೆಆರ್ಪಿಪಿಯ ಒಬ್ಬ ಸದಸ್ಯರ ಬಲದೊಂದಿಗೆ 86 ಮತ ಹೊಂದಿದೆ. ಮತಗಳ ಆಧಾರದ ಮೇಲೆ ಕಾಂಗ್ರೆಸ್ ಸುಲಭವಾಗಿ 3 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಒಂದು ಸ್ಥಾನ ಗಳಿಸಲಿವೆ. ಬಹುತೇಕ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆಗಳಿವೆ.
ಕಾಂಗ್ರೆಸ್ನಿಂದ ನಿವೃತ್ತರಾಗುತ್ತಿರುವ ಡಾ.ಎಲ್. ಹನುಮಂತಯ್ಯ, ಸೈಯದ್ ನಾಸೀರ್ ಹುಸೇನ್ ಹಾಗೂ ಜೆ.ಸಿ. ಚಂದ್ರಶೇಖರ್ ಪುನರಾಯ್ಕೆ ಬಯಸಿದ್ದಾರೆ. ರಾಜ್ಯಸಭೆಯ ನಿವೃತ್ತ ಸದಸ್ಯ ಪ್ರೊ. ರಾಜೀವ್ಗೌಡ, ಎಚ್.ಎಂ. ರೇವಣ್ಣ, ರಘುನಂದನ್ ರಾಮಣ್ಣ, ಕೆ. ಗೋವಿಂದರಾಜು, ಪುಷ್ಪ ಅಮರನಾಥ್, ಆರತಿ ಕೃಷ್ಣ ಅವರ ಹೆಸರೂ ಕೇಳಿ ಬರುತ್ತಿವೆ. ನಿವೃತ್ತರಾಗುತ್ತಿರುವವರ ಪೈಕಿ ಸೈಯದ್ ನಾಸೀರ್ ಹುಸೇನ್ ಮರು ಆಯ್ಕೆ ಬಹುತೇಕ ಖಚಿತವಾಗಿದೆ. ಇನ್ನುಳಿದ ಇಬ್ಬರಿಗೆ ಲೋಕಸಭೆಗೆ ಸ್ಪರ್ಧಿಸುವ ಆಸಕ್ತಿ ಇದ್ದರೆ ಟಿಕೆಟ್ ನೀಡುವ ಭರವಸೆ ಇದೆ. ಇಲ್ಲದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಗೆ ಕ್ಷೇತ್ರ ಹುಡುಕಿ ಸಕ್ರಿಯವಾಗುವಂತೆ ಹೈಕಮಾಂಡ್ ಹೇಳಿದೆ.
ರಾಜೀವ್ಗಿಲ್ಲ ಅವಕಾಶ: ಬಿಜೆಪಿಯಿಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತೆ ಕಣಕ್ಕೆ ಇಳಿಯುವ ಆಸೆ ಹೊಂದಿದ್ದಾರೆ. ಆದರೆ, ಮತ್ತೊಂದು ಅವಧಿಗೆ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದ್ದು, ಕೇರಳದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಸೂಚನೆ ನೀಡುವ ಸಾಧ್ಯತೆಗಳಿವೆ. ಈ ಬಾರಿ ಕೇರಳದಲ್ಲಿ ಖಾತೆ ತೆರೆಯಬೇಕು ಎಂಬ ಮಹತ್ವದ ಉದ್ದೇಶವನ್ನು ಬಿಜೆಪಿ ಹೊಂದಿದೆ.
ಮೈತ್ರಿ ಸಾಧ್ಯತೆ ಇಲ್ಲ
ರಾಜ್ಯಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಮೈತ್ರಿ ಇಲ್ಲವೆಂದು ಬಿಜೆಪಿಯ ಮೂಲಗಳು ಹೇಳುತ್ತವೆ. ರಾಜ್ಯಸಭಾ ಸ್ಥಾನ ಬಿಟ್ಟುಕೊಡುವ ಬಗ್ಗೆ ಜೆಡಿಎಸ್ಗೆ ಯಾವ ಭರವಸೆಯನ್ನೂ ನೀಡಿಲ್ಲ ಎಂದು ಹೇಳುತ್ತಿದೆ. ಒಂದು ವೇಳೆ ಮತದಾನ ನಡೆದಿದ್ದೇ ಆದರೆ ಬಿಜೆಪಿ ತನ್ನ ಪಾಲಿನ 66 ಮತಗಳನ್ನು ತನ್ನ ಅಭ್ಯರ್ಥಿಗೆ ಹಾಕಿಕೊಳ್ಳಲಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜೆಡಿಎಸ್ನ ಮತಗಳು ಕಾಂಗ್ರೆಸ್ಗೆ ಹೋಗಿದ್ದವು. ಚುನಾವಣಾ ಏಜೆಂಟ್ ಆಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರೇ ಕೂತಿದ್ದರೂ ಚಲುವರಾಯಸ್ವಾಮಿ, ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ, ಬಾಲಕೃಷ್ಣ ಹಾಗೂ ಇತರರು ಮತವನ್ನು ಕಾಂಗ್ರೆಸ್ಗೆ ಹಾಕಿದ್ದರು. ನಿಯಮದ ಪ್ರಕಾರ ಮತಪತ್ರ ತೋರಿಸಿಯೇ ಹಾಕಿದ್ದರು. ಈ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿ ಮತಗಳು ಕ್ರಾಸ್ ಆಗಿದ್ದರೂ ಅವರ ಸದಸ್ಯತ್ವವೇನು ಹೋಗುವುದಿಲ್ಲ. ಪಕ್ಷದಿಂದ ಉಚ್ಛಾಟನೆ ಮಾಡಬಹುದಷ್ಟೇ. ಈ ಬಾರಿ ಜೆಡಿಎಸ್ ಸ್ಪರ್ಧೆಗೆ ಮುಂದಾದರೆ ಕಳೆದ ಚುನಾವಣೆಯಲ್ಲಿ ಆದಂತೆ ಆ ಪಕ್ಷದ ಕೆಲ ಶಾಸಕರು ಕಾಂಗ್ರೆಸ್ಗೆ ಮತ ಹಾಕುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎಂದು ಹೇಳಲಾಗುತ್ತಿದೆ.
ಬಿಜೆಪಿಗೂ ಭಯ
ಒಂದು ವೇಳೆ ಐದನೇ ಅಭ್ಯರ್ಥಿ ಕಣದಲ್ಲಿ ಉಳಿದು ಚುನಾವಣೆ ನಡೆದರೆ ಅತೃಪ್ತ ಶಾಸಕರು ಅಡ್ಡಮತ ಹಾಕುವ ಭಯ ಬಿಜೆಪಿಗೂ ಇದೆ. ಅದರಲ್ಲೂ ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ನಿಲುವಿನ ಬಗ್ಗೆ ಗೊಂದಲವಿದೆ. ಮತಗಳು ಕ್ರಾಸ್ ಆದರೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಮುಜುಗರದ ಸಂಗತಿಯಾಗುತ್ತದೆ. ಆದ್ದರಿಂದ ಅವಿರೋಧ ಆಯ್ಕೆ ಬಗ್ಗೆ ಬಿಜೆಪಿ ಒಲವಿದೆ.
ವೇಳಾಪಟ್ಟಿ
* ಫೆ.8 ಅಧಿಸೂಚನೆ ಪ್ರಕಟ
* ಫೆ.15 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
* ಫೆ.16 ನಾಮಪತ್ರಗಳ ಪರಿಶೀಲನೆ
* ಫೆ.20 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನ
* ಫೆ.27 ಮತದಾನ (ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ)
* ಫೆ.27 ಮತ ಎಣಿಕೆ (ಸಂಜೆ 5 ಗಂಟೆಯ ನಂತರ)
ಹದಿನೈದು ರಾಜ್ಯಗಳ 56 ಸ್ಥಾನಗಳಿಗೆ ಚುನಾವಣೆ
ನವದೆಹಲಿ: ದೇಶದ 15 ರಾಜ್ಯಗಳ 56 ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಫೆ. 27ರಂದು ದ್ವೈವಾರ್ಷಿಕ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸೋಮವಾರ ಅಧಿಸೂಚನೆ ಹೊರಡಿಸಿದೆ. ಆಂಧ್ರಪ್ರದೇಶ 3, ಬಿಹಾರ 6, ಛತ್ತೀಸ್ಗಢ 1, ಗುಜರಾತ್ 4, ಹರಿಯಾಣ 1, ಹಿಮಾಚಲ ಪ್ರದೇಶ 1, ಮಧ್ಯಪ್ರದೇಶ 5, ಮಹಾರಾಷ್ಟ್ರ 6, ತೆಲಂಗಾಣ 3, ಉತ್ತರಪ್ರದೇಶ 10, ಉತ್ತರಾಖಂಡ 1, ಪಶ್ಚಿಮ ಬಂಗಾಳ 5, ಒಡಿಶಾ 3, ರಾಜಸ್ಥಾನ 3 ಸ್ಥಾನಗಳಿವೆ. ರಾಜ್ಯಸಭೆಯ ನಿರಂತರತೆ ಕಾಪಾಡಿಕೊಳ್ಳಲು ಪ್ರತಿ 2 ವರ್ಷಕ್ಕೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗಿ, ಚುನಾವಣೆ ನಡೆಯುತ್ತದೆ.
ಸೋಮಣ್ಣ ಆಸಕ್ತಿ
ಬಿಜೆಪಿಯಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಸ್ಪರ್ಧೆಗೆ ಆಸಕ್ತರಾಗಿದ್ದಾರೆ. ಇನ್ನೊಂದೆಡೆ, ಜೆಡಿಎಸ್ ಕೂಡ ಸ್ಥಾನದ ನಿರೀಕ್ಷೆಯಲ್ಲಿದೆ. ಲೋಕಸಭೆಯ ಸ್ಥಾನ ಹೊಂದಾಣಿಕೆಯ ವಿಚಾರದಲ್ಲಿ ಬಿಜೆಪಿ ನೀಡುತ್ತಿರುವ 3 ಸ್ಥಾನಗಳಿಗೆ ಒಪ್ಪಿಗೆ ನೀಡುವುದಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಸ್ಥಾನ ನೀಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ನಿವೃತ್ತಿ ಆಗುವವರು
* ರಾಜೀವ್ ಚಂದ್ರಶೇಖರ್ (ಬಿಜೆಪಿ)
* ಜಿ.ಸಿ. ಚಂದ್ರಶೇಖರ್ (ಕಾಂಗ್ರೆಸ್)
* ಡಾ.ಎಲ್. ಹನುಮಂತಯ್ಯ (ಕಾಂಗ್ರೆಸ್)
* ಸಯ್ಯದ್ ನಾಸೀರ್ ಹುಸೇನ್ (ಕಾಂಗ್ರೆಸ್)