ಮತಯಂತ್ರದಲ್ಲಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ

271221 Local Election Voting Que
ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ಸೋಮವಾರ ಮತದಾರರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಸ್ಯಾನಿಟೈಸರ್ ನೀಡಿ ಮತಗಟ್ಟೆ ಒಳಗೆ ಕಳುಹಿಸಲಾಯಿತು.
Published on

ಕೊಪ್ಪಳ: ತಾಲೂಕಿನ ಭಾಗ್ಯನಗರ ಪಟ್ಟಣ ಪಂಚಾಯಿತಿ ಸೇರಿದಂತೆ ಕುಕನೂರು, ಕನಕಗಿರಿ, ತಾವರಗೇರಾ ಪಪಂ ಹಾಗೂ ಕಾರಟಗಿ ಪುರಸಭೆಗೆ ಸೋಮವಾರ ಮತದಾನ ನಡೆಯಿತು.

ಐದು ಸಂಸ್ಥೆಗಳ 96 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ಭಾಗ್ಯನಗರದಲ್ಲಿ 2, ಕಾರಟಗಿ 1 ಹಾಗೂ ತಾವರಗೇರಾ ಪಪಂನಲ್ಲಿ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಬಾಕಿ 90 ಸ್ಥಾನಗಳಿಗೆ ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೆ ಮತದಾನವಾಯಿತು. ಚಳಿಯ ಕಾರಣಕ್ಕೆ ಕೆಲವೆಡೆ ಬೆಳಗಿನ ಅವಧಿಯಲ್ಲಿ ಮತದಾರರು ಅಷ್ಟಾಗಿ ಮತಗಟ್ಟೆಯತ್ತ ಸುಳಿಯಲಿಲ್ಲ. ನಂತರ ಗುಂಪು ಗುಂಪಾಗಿ ಬಂದು ಹಕ್ಕು ಚಲಾಯಿಸಿದರು. ವೃದ್ಧರು, ಅಂಗವಿಕಲರು ಗಾಲಿಕುರ್ಚಿ ಹಾಗೂ ಇತರರ ಸಹಾಯದೊಂದಿಗೆ ಆಗಮಿಸಿ ಉತ್ಸಾಹದಿಂದಲೇ ವೋಟ್ ಹಾಕಿದರು. ಕೋವಿಡ್ 3ನೆ ಅಲೆ ಭೀತಿ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಸರತಿಯಲ್ಲಿ ಬಂದ ಮತದಾರರನ್ನು ಪರೀಕ್ಷಿಸಿ ಕೇಂದ್ರದೊಳಗೆ ಕಳುಹಿಸಿದರು.

ಸಂಸದ ಸಂಗಣ್ಣ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ, ಮುಖಂಡರಾದ ಅಮರೇಶ ಕರಡಿ, ಸಿ.ವಿ.ಚಂದ್ರಶೇಖರ್, ಶಾಸಕ ರಾಘವೇಂದ್ರ ಹಿಟ್ನಾಳ್, ಶ್ರೀನಿವಾಸ ಗುಪ್ತಾ, ಅಮ್ಜದ್ ಪಟೇಲ್ ಸೇರಿದಂತೆ ಇತರ ನಾಯಕರು ಪಟ್ಟಣದಲ್ಲಿದ್ದು ತಮ್ಮ ಅಭ್ಯರ್ಥಿಗಳಿಗೆ ಬೆಂಬಲ ನೀಡಿದರು. ವಾರ್ಡ್‌ಗಳಿಗೆ ತೆರಳಿ ಮುಖಂಡರನ್ನು ಭೇಟಿ ತಮ್ಮ ಪಕ್ಷದ ಸ್ಥಿತಿಗತಿ ಅರಿತು ಲೆಕ್ಕಾಚಾರದಲ್ಲಿ ತೊಡಗಿದ್ದು ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net