ಉಡುಪಿಯಲ್ಲಿ ಮತಗಟ್ಟೆಗೆ ಬರಲು ಉತ್ಸಾಹ ತೋರಿದ ಹಿರಿಯ ನಾಗರೀಕರು

udp-24-election
Published on

ಉಡುಪಿ: ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ವಿಕಲಚೇತನರಿಗೆ ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾಯಿಸಲು ವಿಶೇಷ ಸೌಲಭ್ಯ ಒದಗಿಸಿದೆ. ಆದರೆ ಜಿಲ್ಲೆಯ ಬಹುತೇಕ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಮತದಾನದ ದಿನದಂದು ಮತಗಟ್ಟೆಗೆ ಖುದ್ದು ತೆರಳಿ ಮತದಾನದ ಹಕ್ಕು ಚಲಾಯಿಸಲು ಉತ್ಸಾಹ ತೋರಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 5864 ಹಿರಿಯ ನಾಗರಿಕರಲ್ಲಿ 4878 ಮಂದಿಗೆ 12ಡಿ ಫಾರಂ ವಿತರಿಸಲಾಗಿದೆ. ಅದೇ ರೀತಿ ಕುಂದಾಪುರದಲ್ಲಿ 6207 ಮಂದಿಯಲ್ಲಿ 4581, ಉಡುಪಿಯ 7823 ರಲ್ಲಿ 5189, ಕಾಪು 5776 ರಲ್ಲಿ 4945 ಮತ್ತು ಕಾರ್ಕಳ 5587 ರಲ್ಲಿ 6021 ಮಂದಿ ಸೇರಿದಂತೆ ಒಟ್ಟು 31254 ಹಿರಿಯ ನಾಗರಿಕರಲ್ಲಿ 25614 ಮಂದಿಗೆ ಮತದಾನದ ಆಯ್ಕೆಯ ಬಗ್ಗೆ ತಿಳಿಸುವಂತೆ ಕೋರಲಾಗಿತ್ತು. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 927 ಮಂದಿ, ಕುಂದಾಪುರ 903 ಮಂದಿ, ಉಡುಪಿ 494 ಮಂದಿ, ಕಾಪುವಿನಲ್ಲಿ 856 ಮಂದಿ ಮತ್ತು ಕಾರ್ಕಳದಲ್ಲಿ 796 ಮಂದಿ ಸೇರಿ ಒಟ್ಟು 3976 ಹಿರಿಯನಾಗರಿಕರು ಮಾತ್ರ ಮನೆಯಲ್ಲಿ ಮತದಾನ ಮಾಡುವ ಸೌಲಭ್ಯವನ್ನು ಸ್ವೀಕರಿಸಿದ್ದಾರೆ.

630 ಮಂದಿ ಮನೆಯಿಂದಲೇ ಮತದಾನ
ಜಿಲ್ಲೆಯಲ್ಲಿ ಒಟ್ಟು 11,680 ಅಂಗವಿಕಲರನ್ನು ಗುರುತಿಸಲಾಗಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರದ 2989 ಅಂಗವಿಕಲರಲ್ಲಿ 2632 ಮಂದಿಗೆ, ಕುಂದಾಪರದಲ್ಲಿ 2524 ರಲ್ಲಿ 2042 ಮಂದಿಗೆ, ಉಡುಪಿಯಲ್ಲಿ 1797 ರಲ್ಲಿ 2169 ಮಂದಿಗೆ, ಕಾಪುವಿನಲ್ಲಿ ಎಲ್ಲಾ 2229 ಮಂದಿಗೆ ಮತ್ತು ಕಾರ್ಕಳದಲ್ಲಿ 2141 ರಲ್ಲಿ 1719 ಮಂದಿ ಸೇರಿದಂತೆ ಒಟ್ಟು 10,791 ಮಂದಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವನ್ನು ಬಳಸಿಕೊಳ್ಳುವ ಕುರಿತು ಅಧಿಕಾರಿಗಳು ಮನೆಗಳಿಗೆ ತೆರಳಿ ಅರ್ಜಿಯನ್ನು ವಿತರಿಸಿದ್ದರು. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 140, ಕುಂದಾಪುರ 202, ಉಡುಪಿ 105, ಕಾಪು 152 ಮತ್ತು ಕಾರ್ಕಳದಲ್ಲಿ 31 ಸೇರಿದಂತೆ ಒಟ್ಟು 630 ಅಂಗವಿಕಲರು ಮಾತ್ರ ಈ ಸೌಲಭ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net