

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಎದ್ದಿರುವ ಗ್ರಾಪಂ ಚುನಾವಣೆ ಬಹಿಷ್ಕಾರದ ಹುಯಿಲು ಜಿಲ್ಲಾಡಳಿತಕ್ಕೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಭಾನುವಾರ ಗ್ರಾಮಸ್ಥರ ಮನವೊಲಿಸಲು ಜಿಲ್ಲಾಡಳಿತದ ಅಧಿಕಾರಿಗಳ ತಂಡ ನಡೆಸಿದ ಪ್ರಯತ್ನ ವಿಫಲವಾಗಿದೆ.
ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ಭಾನುವಾರ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಅಧ್ಯಕ್ಷತೆಯಲ್ಲಿ ಖಾಂಡ್ಯ ಹೋಬಳಿಯ ದೇವದಾನ, ಬಿದರೆ, ಕಡವಂತಿ ಹಾಗೂ ಹುಯಿಗೆರೆ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರ ಸಭೆಯಲ್ಲಿ ಚುನಾವಣೆ ಬಹಿಷ್ಕಾರ ನಿರ್ಧಾರವನ್ನು ಹಿಂಪಡೆಯುವಂತೆ ಜನರನ್ನು ಮನವಿ ಮಾಡಿದರು.
ಆ.22ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಯೋಜನೆಯ ಬಗ್ಗೆ ನಡೆದ ಸಭೆಯ ನಿರ್ಣಯವನ್ನು ತಿಳಿಸಿದರಲ್ಲದೆ, ಈ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದು, ವರದಿಗೆ ಸ್ಪಂದಿಸಿದ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮುಖ್ಯಮಂತ್ರಿಗಳಿಗೆ ಮರುಪತ್ರ ಬರೆದಿದ್ದು, ಪರಿಷ್ಕೃತ ವರದಿ ಸಲ್ಲಿಸಲು ಸೂಚಿಸಲಾಗಿದೆ. ಗ್ರಾಮಸ್ಥರು ಯಾವುದೇ ಆತಂಕ ಪಡಬೇಕಿಲ್ಲ ಎಂದರು.
ಸದಸ್ಯರನ್ನು ಆರಿಸಿದಲ್ಲಿ ಅನುಕೂಲ
ಜತೆಗೆ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡ ಗ್ರಾಪಂಗಳು ಜನರ ಬೇಡಿಕೆಗಳ ಕುರಿತು ನಿರ್ಣಯ ಕೈಗೊಂಡು ಅಧಿಕೃತವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಕಳಿಸಿದರೆ ಹೆಚ್ಚಿನ ಮೌಲ್ಯ ಬರುತ್ತದೆ. ಈ ಹಿನ್ನೆಲೆಯಲ್ಲಿ ಪಂಚಾಯ್ತಿ ಚುನಾವಣೆಗಳಲ್ಲಿ ಭಾಗವಹಿಸಿ ಚುನಾಯಿತ ಮಂಡಳಿಗಳನ್ನು ಅಸ್ತಿತ್ವಕ್ಕೆ ತರುವುದರ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ಅವಕಾಶಗಳಿವೆ ಎಂದು ಮನವೊಲಿಸುವ ಪ್ರಯತ್ನ ನಡೆಸಿದರು.
ಚುನಾವಣೆ ನಮಗೇಕೆ ಬೇಕು?
ಕಸ್ತೂರಿ ರಂಗನ್ ವರದಿ ಸೇರಿದಂತೆ, ಹುಲಿಯೋಜನೆ, ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯಗಳಿಂದಾಗಿ ಮಲೆನಾಡಿಗರ ಬದುಕು ಬೀದಿ ಪಾಲಾಗುತ್ತಿರುವ ಸಂದರ್ಭದಲ್ಲಿ ಚುನಾವಣೆ, ರಾಜಕೀಯ ಎಲ್ಲ ಯಾಕಾದರೂ ಬೇಕು ಎಂದು ಪ್ರಶ್ನಿಸಿದ ಗ್ರಾಮಸ್ಥರು, ಮೊದಲು ಈ ಸಮಸ್ಯೆಗಳಿಂದ ನಮ್ಮನ್ನು ಮುಕ್ತಿಗೊಳಿಸಿ. ಬಳಿಕ ಚುನಾವಣೆ ನಡೆದಲ್ಲಿ ಭಾಗವಹಿಸುವುದಾಗಿ ಪಟ್ಟು ಹಿಡಿದರು.
ಚುನಾವಣೆ ಬಳಿಕ ಮೂರು ಪಕ್ಷದವರು ಮೂರು ದಿಕ್ಕಿನಲ್ಲಿರುತ್ತಾರೆ. ಆಗ ನಾವು ಯಾರನ್ನೂ ಕೇಳಲು ಸಾಧ್ಯವಾಗದೆ ಅಸಹಾಯಕರಾಗುವುದರಿಂದ ಸಮಸ್ಯೆಗೆ ಪರಿಹಾರ ದೊರೆತ ಬಳಿಕವೇ ಚುನಾವಣೆ ನಡೆಸಿ ಎಂದು ಗ್ರಾಮಸ್ಥರು ಹೇಳಿದರು.
ಗ್ರಾಪಂ ಪ್ರತಿನಿಧಿಗಳಿಂದ ನಿರ್ಣಯಕ್ಕೆ ಸಲಹೆ
ಮತ್ತೆ ಉಪ ವಿಭಾಗಾಧಿಕಾರಿಗಳು ಮಾತನಾಡಿ, ಚುನಾವಣೆಯಲ್ಲಿ ಭಾಗವಹಿಸುವುದು ಪ್ರಜಾಪ್ರಭುತ್ವ ನೀಡಿರುವ ಹಕ್ಕು. ನಿಮ್ಮ ಪ್ರತಿನಿಧಿಗಳನ್ನು ಆರಿಸಿಕೊಂಡು ನಂತರ ಹೋರಾಟ ಮುಂದುವರಿಸಲು ಅವಕಾಶವಿದೆ. ಚುನಾವಣೆ ಆಗದೆ ಇದ್ದರೆ ನಿಮಗೆ ಧ್ವನಿ ಇಲ್ಲದಂತಾಗುತ್ತದೆ. ನೀವು ಕೇವಲ ಕಾಗದದಲ್ಲಿ ಮನವಿ ಪತ್ರ ಕೊಡುವುದಕ್ಕೂ ಗ್ರಾಪಂ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಮಾಡಿ ಲೆಟರ್‍ಹೆಡ್‍ನಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಕಳುಹಿಸುವುದಕ್ಕೂ ವ್ಯತ್ಯಾಸವಿದೆ ಎಂದು ಹೇಳಿದರು.
ಆಡಳಿತಾಧಿಕಾರಿ ಮುಖೇನ ಪತ್ರ ಕಳುಹಿಸಿ
ಆದಕ್ಕೂ ಒಪ್ಪದ ಗ್ರಾಮಸ್ಥರು ಈಗ ಗ್ರಾಪಂಗಳಲ್ಲಿ ಆಡಳಿತಾಧಿಕಾರಿಗಳಿದ್ದು, ಅವರ ಮೂಲಕವೇ ಪತ್ರಗಳನ್ನು ಕಳುಹಿಸಿ ಎಂದು ಸಲಹೆ ನೀಡಿದರು. ಮತ್ತೊಮ್ಮೆ ಸಮಿತಿ ಸಭೆ ನಡೆಸಿ ನಿರ್ಧರಿಸುವುದಾಗಿ ತಿಳಿಸಿದರಲ್ಲದೆ, ಜನರಿಗೆ ಸಮಸ್ಯೆಯಾಗುವ ಈ ಯೋಜನೆಗಳನ್ನು ಕೈಬಿಡುವ ಕುರಿತು ನಿರ್ದಿಷ್ಟ ಲಿಖಿತ ಆದೇಶ ಬರುವವರೆಗೂ ಗ್ರಾಪಂ ಚುನಾವಣೆ ಬಹಿಷ್ಕಾರ ಹಿಂಪಡೆಯಲು ಸಾಧ್ಯವಿಲ್ಲ. ಇದು ನಮ್ಮ ಒಮ್ಮತದ ತೀರ್ಮಾನ ಎಂದರು.
ನಾಲ್ಕು ಗ್ರಾಪಂ ವ್ಯಾಪ್ತಿಯ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಮುಖಂಡರು ಸೇರಿದಂತೆ ಪ್ರಮುಖರಾದ ಸೋಮೇಗೌಡ, ಚಂದ್ರಶೇಖರ್, ಸತೀಶ್, ಸೋಮಶೇಖರಯ್ಯ, ಬೆಳೆಗಾರರ ಸಂಘದ ಅಧ್ಯಕ್ಷ ಸಂದೇಶ್ ಇತರರು ಸಭೆಯಲ್ಲಿದ್ದರು.
ಅಧಿಕಾರಿಗಳ ತಂಡದಲ್ಲಿ ಉಪವಿಭಾಗಾಧಿಕಾರಿ ಮಾತ್ರವಲ್ಲದೆ ಕೊಪ್ಪ ಡಿವೈಎಸ್ಪಿ ರಾಜು, ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜು, ತಾಪಂ ಇಒ ರೇವಣ್ಣ, ರಾಜಸ್ವ ನಿರೀಕ್ಷಕ ಸಂತೋಷ್, ಉಪತಹಸೀಲ್ದಾರ್ ಸುಜಾತ, ಸಬ್‍ಇನ್ಸ್‍ಪೆಕ್ಟರ್ ಸುರೇಶ್ ಇದ್ದರು.
ಸಭೆಯಲ್ಲಿ ಭಾಗವಹಿಸಲು ಸಿದ್ಧರಿರಲಿಲ್ಲ
ಆರಂಭದಲ್ಲಿ ಉಪವಿಭಾಗಾಧಿಕಾರಿಗಳು ಮತ್ತಿತರ ಅಧಿಕಾರಿಗಳ ಮಾತನ್ನೇ ಆಲಿಸಲು ತಯಾರಿರದ ಗ್ರಾಮಸ್ಥರನ್ನು ಎಸಿ ನಾಗರಾಜ್ ನಾವೂ ಸಹ ಗ್ರಾಮಸ್ಥರ ಪರವಾಗಿಯೇ ಬಂದಿದ್ದೇವೆ. ಸಮಸ್ಯೆ ಪರಿಹರಿಸಲು ಚುನಾವಣೆ ಬಹಿಷ್ಕಾರಕ್ಕಿಂತ ಉತ್ತಮ ಮಾರ್ಗಗಳಿದ್ದು, ಅವುಗಳ ಬಗ್ಗೆ ಚಿಂತನೆ ಮಾಡುವಂತೆ ಸಲಹೆ ನೀಡಿದ ಬಳಿಕ ಸಭೆ ನಡೆಸಲು ಅವಕಾಶವಾಗಿದೆ.
ಗ್ರಾಮಸ್ಥರ ತೀರ್ಮಾನ
ಇನ್ನು ಮುಂದೆ ಯಾವುದೇ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಜನರ ಮನವೊಲಿಸಲು ಬಂದಲ್ಲಿ ಸ್ಪಂದಿಸದಿರುವಂತೆ ನಾಗರಿಕ ಹಿತರಕ್ಷಣಾ ವೇದಿಕೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.
* ಚುನಾವಣೆ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾಮಪತ್ರ ಸಲ್ಲಿಕೆ ಆರಂಭವಾಗುವ ಡಿ.7ರಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಡಿ.11ರವರೆಗೂ ಪ್ರತಿದಿನ ಚುನಾವಣಾಧಿಕಾರಿ ಕಚೇರಿ ಮುಂದೆ ಕಾವಲಿದ್ದು, ನಾಮಪತ್ರ ಸಲ್ಲಿಸಲು ಬರುವವರಿಗೆ ಮನವರಿಕೆ ಮಾಡಲಾಗುತ್ತದೆ. ಊಟ, ತಿಂಡಿ ವ್ಯವಸ್ಥೆಯನ್ನು ಸಹ ಅಲ್ಲಿಯೇ ಮಾಡಿಕೊಳ್ಳುತ್ತೇವೆ.
ಯೋಗಾನಂದ್
ಹೋರಾಟ ಸಮಿತಿ ಮುಖಂಡ,
ಖಾಂಡ್ಯ ಹೋಬಳಿ ಗ್ರಾಮಸ್ಥರು
* ಚುನಾವಣೆ ಎನ್ನುವುದು ಸಂವಿಧಾನಾತ್ಮಕ ಪ್ರಕ್ರಿಯೆ. ಚುನಾವಣೆ ನಡೆಸುವುದು, ಮತದಾನದಲ್ಲಿ ಭಾಗವಹಿಸುವುದು ಎಲ್ಲರ ಹಕ್ಕು. ಅದು ಎಲ್ಲರಿಗೂ ಇರುತ್ತದೆ. ಪ್ರಸ್ತುತ ಇಲ್ಲಿರುವ ಸಮಸ್ಯೆ ತಡೆಯಲು ಅಥವಾ ಅಭಿಪ್ರಾಯ ವ್ಯಕ್ತಪಡಿಸಲು ಗ್ರಾಪಂ ಮೂಲಕ ಪ್ರಯತ್ನ ನಡೆಸುವುದು ಸೂಕ್ತ. ಸಂವಿಧಾನಾತ್ಮಕವಾಗಿ ಅಸ್ತಿತ್ವಕ್ಕೆ ಬರುವ ಸಂಸ್ಥೆಗಳಿಂದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸುವುದು ಅತ್ಯುತ್ತಮ ಕ್ರಮ.
ಡಾ.ಎಚ್.ಎಲ್.ನಾಗರಾಜ್
ಉಪ ವಿಭಾಗಾಧಿಕಾರಿ