

ಸಿರವಾರ: ರಾಯಚೂರಿನಲ್ಲಿ ಏಮ್ಸ್ ಆರಂಭಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿನ ಕಾಲೇಜು ವಿದ್ಯಾರ್ಥಿಗಳು, ಕನ್ನಡ, ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದವು.
ಸಿರವಾರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಉದಯಕುಮಾರ್ ಮಾತನಾಡಿ, ಈ ಹಿಂದೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲೆಗೆ ಐಐಟಿ ತಪ್ಪಿತ್ತು. ಈಗ ಏಮ್ಸ್ ತಪ್ಪಿದರೆ ಈ ಭಾಗದ ಜನರು ರೊಚ್ಚಿಗೇಳಬೇಕಾಗುತ್ತದೆ. ಏಮ್ಸ್ ಆರಂಭಿಸುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ನಡೆಯುತ್ತಿರುವ ಹೋರಾಟ 501 ದಿನ ಪೂರೈಸಿದೆ. ಧಾರವಾಡ ಭಾಗದ ರಾಜಕಾರಣಿಗಳಂತೆ ಕಲ್ಯಾಣ ಕರ್ನಾಟಕ ಭಾಗದ ರಾಜಕಾರಣಿಗಳು ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಿದರೆ ಈ ಭಾಗದ ಜನರು ಬೇರೆ ಜಿಲ್ಲೆಗೆ ಚಿಕಿತ್ಸೆ ಹೋಗುವುದು ತಪ್ಪುತ್ತದೆ. ಉನ್ನತ ಮಟ್ಟದ ಚಿಕಿತ್ಸೆ ಸಿಗುವುದರ ಜತೆಗೆ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಸಿಗುತ್ತದೆ ಎಂದರು.
ಬಸವ ವೃತ್ತದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು. ಪ್ರಧಾನಿಗೆ ಬರೆದ ಮನವಿ ಪತ್ರವನ್ನು ತಹಸಿಲ್ ಕಚೇರಿ ಶಿರಸ್ತೇದಾರ್ ಫಕೃದ್ದೀನ್‌ಗೆ ಸಲ್ಲಿಸಲಾಯಿತು. ಪ್ರಮುಖರಾದ ಜಿ.ಲೋಕರೆಡ್ಡಿ, ಫಕೃದ್ದೀನ್, ಚಂದ್ರಶೇಖರ್ ಎಲ್ಹೇರಿ, ಅರಳಪ್ಪ ಯದ್ದಲದ್ದಿನ್ನಿ, ಮೇಷಾಕ್ ದೊಡ್ಡಮನಿ, ಕುಮಾರ್ ಭಜಂತ್ರಿ, ಸೂರಿ ಹುಸೇನಪ್ಪ ನಾಯಕ, ವಾಹೀದ್, ಶಂಕರ್ ಮರಾಠ, ತಿಮ್ಮಣ್ಣ ಮರಾಠ, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಇದ್ದರು.