

ಮಡಿಕೇರಿ: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಈ ಬಾರಿ ದಶಮಂಟಪಗಳ ತೀರ್ಪುಗಾರಿಕೆಯಲ್ಲಿ ಯಾವುದೇ ರಾಜಕೀಯ ಮಾಡಲು ಅವಕಾಶ ನೀಡುವುದಿಲ್ಲ. ಪ್ರಾಮಾಣಿಕವಾಗಿ ತೀರ್ಪುಗಾರಿಕೆ ನಡೆಸುವುದಾಗಿ ದಶಮಂಟಪ ಸಮಿತಿ ಅಧ್ಯಕ್ಷ ಮನುಮಂಜುನಾಥ್ ನಗರದ ನಾಲ್ಕು ಶಕ್ತಿ ದೇವತೆಗಳ ಮೇಲೆ ಪ್ರಮಾಣ ಮಾಡಿದ ಘಟನೆ ನಡೆಯಿತು.
ನಗರದ ರಾಜ್‌ದರ್ಶನ್ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ದಶಮಂಟಪ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಮನುಮಂಜುನಾಥ್, ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ದಶಮಂಟಪಗಳು ಸಿದ್ಧತೆ ಕೈಗೊಂಡಿವೆ. ಮಂಟಪಗಳ ತೀರ್ಪುಗಾರಿಕೆಗೆ ಉತ್ತಮ ತೀರ್ಪುಗಾರರನ್ನೇ ನೇಮಿಸಿ ಪಾರದರ್ಶಕವಾಗಿ ತೀರ್ಪುಗಾರಿಕೆ ನಡೆಸಲಾಗುತ್ತದೆ. ಈ ಬಗ್ಗೆ ಶಕ್ತಿ ದೇವತೆಗಳ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಹೇಳಿದರಲ್ಲದೆ, ಮಂಟಪ ಸಮಿತಿಗಳು ದಶಮಂಟಪ ಸಮಿತಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಒಂದು ಕೋಟಿ ಅನುದಾನದಲ್ಲಿ ಕರಗ ಹಾಗೂ ಮಂಟಪಗಳಿಗೆ ಸೇರಿಸಿ ೬೦ ಲಕ್ಷ ರೂ. ಅನುದಾನಕ್ಕೆ ದಸರಾ ಸಮಿತಿಗೆ ಮನವಿ ಮಾಡಲು ಚಿಂತನೆ ನಡೆಸಿರುವುದಾಗಿ ಅವರು ಹೇಳಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಹತ್ತು ಮಂಟಪ ಸಮಿತಿಗಳ ಪ್ರಮುಖರು ತಮ್ಮ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು. ಬೆಳಿಗ್ಗೆ ೪ ಗಂಟೆಯೊಳಗಾಗಿ ತೀರ್ಪುಗಾರಿಕೆಯನ್ನು ಪೂರ್ಣಗೊಳಿಸಬೇಕು. ಮಂಟಪಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಶೀಘ್ರ ಮಾಹಿತಿ ನೀಡಬೇಕು. ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಆದಷ್ಟು ಶೀಘ್ರ ಮಾಡಬೇಕು. ದಸರಾ ಉತ್ಸವಕ್ಕೂ ಮುನ್ನ ಮಂಟಪಗಳಿಗೆ ಅನುದಾನ ಸಿಗುವಂತಾಗಬೇಕು ಎಂಬ ಇತ್ಯಾದಿ ಕೋರಿಕೆಗಳನ್ನು ಸಮಿತಿಯವರು ಮುಂದಿಟ್ಟರು. ಈ ಬಗ್ಗೆ ಮುಂದಿನ ದಸರಾ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಮನುಮಂಜುನಾಥ್ ನುಡಿದರು.
ಸಭೆಯಲ್ಲಿ ಕೋದಂಡ ರಾಮ ದೇವಾಲಯ ಜೀರ್ಣೋದ್ದಾರ ಸಂಬಂಧ ದಶಮಂಟಪಗಳು ಆರ್ಥಿಕ ನೆರವು ನೀಡಬೇಕೆಂದು ಕೋದಂಡ ರಾಮ ದೇವಾಲಯ ಸಮಿತಿಯಿಂದ ದಶಮಂಟಪ ಸಮಿತಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ದಶಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಯಶ್ವಂತ್ ಸಭೆಯಲ್ಲಿ ಪ್ರಸ್ತಾಪಿಸಿ ಎಲ್ಲಾ ಸಮಿತಿಗಳು ದೇವಾಲಯದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ಮನವಿ ಮಾಡಿದರು.
ಸಭೆಯಲ್ಲಿ ದಶಮಂಟಪ ಸಮಿತಿ ಉಪಾಧ್ಯಕ್ಷ ಹೇಮ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಯಶ್ವಂತ್, ಮನೋಜ್, ಮಾಜಿ ಅಧ್ಯಕ್ಷ ಟಿ.ಪಿ.ರಾಜೇಂದ್ರ ಕುಂದುರುಮೊಟ್ಟೆ ದೇವಾಲಯ ದಸರಾ ಸಮಿತಿ ಅಧ್ಯಕ್ಷ ನಂದಾ ಉತ್ತಪ್ಪ, ಮಾಜಿ ಅಧ್ಯಕ್ಷ ಸದಾನಂದ, ನವೀನ್ ಪೂಜಾರಿ ಉಪಸ್ಥಿತರಿದ್ದರು.