

ಸಿಂಧನೂರು: ಆಂಧ್ರಪ್ರದೇಶದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ವೈಎಸ್‌ಆರ್ ಕಾಂಗ್ರೆಸ್ ರಾಜಕೀಯ ಅರಾಜಕತೆ ಸೃಷ್ಟಿಸಿದೆ ಎಂದು ಕಮ್ಮವಾರಿ ಸಂಘದ ತಾಲೂಕು ಉಪಾಧ್ಯಕ್ಷ ಬಿ.ಹರ್ಷ ಆರೋಪಿಸಿದರು.
ನಗರದ ಯಲಮಂಚಲಿ ವಾಸುದೇವ ಕಲ್ಯಾಣ ಮಂಟಪದಲ್ಲಿ ಆಂಧ್ರಪ್ರದೇಶ ರಾಜಕೀಯ ವ್ಯವಸ್ಥೆಯಲ್ಲಿ ಕರಾಳತೆ ಖಂಡನಾ ಸಭೆಯಲ್ಲಿ ಸೋಮವಾರ ಮಾತನಾಡಿದರು. ಆಂಧ್ರದಲ್ಲಿ ಪ್ರಜಾ ಸತ್ತಾತ್ಮಕತೆ ಕೊಲೆಯಾಗಿದ್ದು, ಪೊಲೀಸ್ ರಾಜ್ಯ ನಿರ್ಮಾಣವಾಗಿದೆ. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಆಂಧ್ರಪ್ರದೇಶಕ್ಕೆ ವಿಶೇಷ ಕೊಡುಗೆ ಕೊಟ್ಟಿದ್ದಾರೆ. ಆದರೆ, ಈಗಿನ ಸರ್ಕಾರ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಲ್ಲ. ಸಿಐಡಿ ಮತ್ತು ಎಸಿಬಿಯನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡು, ದೇಶದ ರಾಜಕೀಯ ವ್ಯವಸ್ಥೆಗೆ ಕಳಂಕ ತಂದಿದೆ. ಆಂಧ್ರ ಸರ್ಕಾರ ಸೇಡಿನ ರಾಜಕಾರಣ ಮಾಡದೆ, ಅಭಿವೃದ್ಧಿ ಪರವಾದ ರಾಜಕಾರಣ ಮಾಡಲಿ ಎಂದರು.
ಕಮ್ಮವಾರಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ವೈ.ನರೇಂದ್ರನಾಥ ಮಾತನಾಡಿ, ಆಂಧ್ರಪ್ರದೇಶದಲ್ಲಿ ಕಳೆದ 20 ವರ್ಷದಿಂದ ರಾಜಕೀಯ ಅರಾಜಕತೆ ಇದೆ. 10 ವರ್ಷದಿಂದ ಅರಾಜಕತೆ ಹೆಚ್ಚಾಗಿದೆ. ವೈಎಸ್‌ಆರ್ ಕಾಂಗ್ರೆಸ್ ಅಭಿವೃದ್ಧಿ ಮರೆತು, ದ್ವೇಷದ ರಾಜಕಾರಣ ಮಾಡುತ್ತಿದೆ. ಕಾನೂನಿನ ಮಾನದಂಡಗಳಿಗೆ ಬೆಲೆ ಇಲ್ಲದಂತಾಗಿದೆ. ಕರ್ನಾಟಕದ ಜನರಲ್ಲಿರುವ ಜಾಗೃತಿ, ಆಂಧ್ರಪ್ರದೇಶದಲ್ಲಿ ಇಲ್ಲದಿರುವುದು ದುರಂತ. ವೈಎಸ್‌ಆರ್ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.