ನೆಲಮಂಗಲದಲ್ಲಿ ಗರಿಗೆದರಿದ ರಾಜಕೀಯ, ಮಹಿಳೆಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಕುರ್ಚಿ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು

10 Nela Ph 01 City Municipal Office
Published on

ಸುಗ್ಗರಾಜು ಜಿ.ಕೆ. ನೆಲಮಂಗಲ

ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಮೀಸಲಾತಿಯ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸುತ್ತಿದ್ದಂತೆ ನಗರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.

2019ರ ಚುನಾವಣೆಯಲ್ಲಿ ಪುರಸಭೆಗೆ ಚುನಾಯಿತರಾಗಿದ್ದ ಸದಸ್ಯರನ್ನೇ ನಗರಸಭಾ ಸದಸ್ಯರಾಗಿ ಮೇಲ್ದರ್ಜೆಗೇರಿಸಿದ್ದ ಸರ್ಕಾರ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿದ್ದು, ಈಗ ನಗರಸಭೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯವರ್ಗ ಮಹಿಳೆಗೆ, ಉಪಾಧ್ಯಕ್ಷ ಸ್ಥಾನವನ್ನು ಪ.ಜಾತಿ ಮಹಿಳೆಗೆ ಮೀಸಲಿರಿಸಿ ಅಧಿಸೂಚನೆ ಹೊರಡಿಸಿರುವುದು ರಾಜಕೀಯದ ಬಿರುಸಿನ ಚಟುವಟಿಕೆಗೆ ಕಾರಣವಾಗಿದೆ.

23 ಸ್ಥಾನಗಳಲ್ಲಿ 13 ಜೆಡಿಎಸ್ ಪಾಲು: ಪುರಸಭೆಯ 23 ಸ್ಥಾನಗಳಿಗೆ 2019 ಜೂ.1 ರಂದು ಚುನಾವಣೆ ನಡೆದು, 13 ಜೆಡಿಎಸ್, 7 ಕಾಂಗ್ರೆಸ್, 2 ಬಿಜೆಪಿ,1 ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು. ಚುನಾವಣೆ ಬಳಿಕ 2019ರ ಡಿ.26 ರಂದು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿ ನಗರಾಭಿವೃದ್ಧಿ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ನಂತರ ಸರ್ಕಾರದ ಆದೇಶದಂತೆ ನಗರಸಭಾ ಸದಸ್ಯರಾಗಿ ಮೇಲ್ದರ್ಜೆಗೇರಿರುವ ಚುನಾಯಿತರು ಆರಂಭಿಕ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಲು ಸಜ್ಜಾಗುತ್ತಿದ್ದಾರೆ.

ಕಾಂಗ್ರೆಸ್‌ಗೆ ಒಲಿಯಲಿದೆ ಉಪಾಧ್ಯಕ್ಷ ಸ್ಥಾನ: ಜೆಡಿಎಸ್ ಸದಸ್ಯರೇ ಅಧ್ಯಕ್ಷ ಗಾದಿಗೇರಲಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಹಾಲಿ ನಗರಸಭೆ 23 ಸ್ಥಾನಗಳ ಪೈಕಿ 13 ಸದಸ್ಯರ ಬಲ ಹೊಂದಿದ್ದ ಜೆಡಿಎಸ್‌ನಲ್ಲಿ ಪರಿಶಿಷ್ಟ ಜಾತಿ ಮಹಿಳೆ ಮೀಸಲು ಕ್ಷೇತ್ರದಿಂದ ಯಾವುದೇ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ. ಹೀಗಾಗಿ ಕಾಂಗ್ರೆಸ್‌ನ ಪ.ಜಾತಿ ಮಹಿಳಾ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ಒಲಿಯಲಿದೆ.

ಸದಸ್ಯರು ನಿರಾಳ: ನಗರಸಭೆಗೆ ವಿಲೀನಗೊಂಡಿದ್ದ ಗ್ರಾಪಂಗಳ ದಾಖಲೆಗಳ ಹಸ್ತಾಂತರ, ಗಡಿ ಗುರುತು ಪ್ರಕ್ರಿಯೆಗಳು ಪೂರ್ಣಗೊಳ್ಳದಿದ್ದರೂ ಅಧಿಕಾರಿಗಳ ಮೇಲೆ ಒತ್ತಡ ತಂದ ಕೆಲ ಮುಖಂಡರು ತರಾತುರಿಯಲ್ಲಿ ನಗರಸಭಾ ಚುನಾವಣಾ ಕ್ಷೇತ್ರಗಳ ವಿಂಗಡಣೆಗೆ ಮುಂದಾಗಿದ್ದು, ಚುನಾಯಿತ ಸದಸ್ಯರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.

ಅಲ್ಲದೆ 2019ರ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳು ಹಾಗೂ ಮುಂಬರುವ ನಗರಸಭೆಗೆ ವಿಲೀನಗೊಂಡಿರುವ ಗ್ರಾಪಂಗಳ ಕೆಲ ಸದಸ್ಯರು (ನಗರಸಭಾ ಚುನಾವಣಾ ಆಕಾಂಕ್ಷಿತರು) ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದವರ ಸದಸ್ಯತ್ವ ರದ್ದು ಮಾಡಿ ಮತ್ತೆ ನಗರಸಭೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಆದರೆ ಈಗ ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 361(3) ರನ್ವಯ ಪುರಸಭೆ ಸದಸ್ಯರನ್ನು ನಗರಸಭೆ ಸದಸ್ಯರುಗಳೆಂದು ಪರಿಗಣಿಸಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದು ಸದಸ್ಯರಲ್ಲಿ ನಿರಾಳ ತಂದಿದೆ.

ಪುರಸಭೆ ಚುನಾವಣೆಯಲ್ಲಿ ಚುನಾಯಿತರಾಗಿದ್ದ ಸದಸ್ಯರನ್ನು ನಗರಸಭೆ ಸದಸ್ಯರಾಗಿ ಮೇಲ್ದರ್ಜೆರಿಸಿ ಒಳ್ಳೆಯ ಕೆಲಸ ಮಾಡಿತ್ತು. ಆದರೀಗ ಪ.ಜಾತಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಿರಿಸಿ ಆದೇಶಿಸಿರುವುದು ಮತ್ತಷ್ಟು ಸಂತೋಷವನ್ನುಂಟು ಮಾಡಿದೆ. 23 ಸದಸ್ಯರು ಒಟ್ಟಾಗಿ ಸೇರಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಗಂಗಾಧರರಾವ್, ಸದಸ್ಯ ಸದಸ್ಯತ್ವ ಅಸ್ತಿತ್ವದ ಪ್ರಶ್ನೆ ಉದ್ಭವಿಸಿದ್ದ ಸಂದರ್ಭದಿಂದಲೂ ಸದಸ್ಯರೆಲ್ಲರೂ ಒಗ್ಗಟ್ಟಾಗಿ ಸರ್ಕಾರದ ಹಂತದಲ್ಲಿ ಪಟ್ಟ ಪರಿಶ್ರಮದಿಂದಾಗಿ ಒಳ್ಳೆಯ ಪ್ರತಿಫಲ ದೊರೆತಿದೆ. ಸರ್ಕಾರದ ಮೀಸಲಾತಿ ನಿರ್ಣಯದಿಂದಾಗಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುತ್ತಿರುವ ಬಗ್ಗೆ ಯಾವುದೇ ಬೇಸರವಿಲ್ಲ. ಆಡಳಿತದ ಹಾದಿ ಮತ್ತಷ್ಟು ಸುಗಮವಾಗಲಿದೆ. ಎನ್.ಪಿ. ಹೇಮಂತ್‌ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net