ರಾಜಕೀಯ ಬಿಟ್ಟು ಪಿಕೆಪಿಎಸ್ ಬೆಳೆಸಿ

11blh4a-Web
ಕೊರವಿನಕೊಪ್ಪ ಗ್ರಾಮದ ಪಿಕೆಪಿಎಸ್ ನೂತನ ಕಟ್ಟಡವನ್ನು ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಉದ್ಘಾಟಿಸಿದರು. ಸಿದ್ದಲಿಂಗ ಸ್ವಾಮೀಜಿ, ಗಂಗಾಧರ ಸ್ವಾಮೀಜಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಇತರರು ಇದ್ದರು.
Published on

ಬೈಲಹೊಂಗಲ : ರಾಜಕೀಯ ಹೊರತಾದ ಸಹಕಾರ ಸಂಘಗಳ ಬೆಳವಣಿಗೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ.

ತಾಲೂಕಿನ ಕೊರವಿನಕೊಪ್ಪ ಗ್ರಾಮದ ಪಿಕಿಪಿಎಸ್ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗಳು ತಮ್ಮ ಸ್ವಪ್ರತಿಷ್ಠೆಗಾಗಿ ಹಾಗೂ ರಾಜಕಾರಣದಿಂದ ಇನ್ನೂ ಚೇತರಿಸಿಕೊಳ್ಳುತ್ತಿಲ್ಲ. ಆದರೆ, ಬೆಳಗಾವಿ ಡಿಸಿಸಿ ಬ್ಯಾಂಕ್ ನೈಜ ಮಾಲೀಕರು ಈ ಜಿಲ್ಲೆಯ ಪಹಣಿ ಪತ್ರಿಕೆ ಹೊಂದಿದ ರೈತರು. ಜಿಲ್ಲೆಯಲ್ಲಿ ಸುಮಾರು 250 ಕೋಟಿ ರೂ.ಗೂ ಅಧಿಕ ಶೂನ್ಯ ದರದ ಸಾಲ ವಿತರಿಸಲಾಗಿದೆ. ಮುಂಬರುವ ದಿನಗಳಲ್ಲಿ ಅದನ್ನು ಐನೂರು ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಸಹಕಾರಿ ಸಂಘಗಳಲ್ಲಿ ರಾಜಕಾರಣ ಎಂದಿಗೂ ಸಲ್ಲುವುದಿಲ್ಲ ಎಂದರು.

ಪ್ರತಿಯೊಂದು ಜಾತಿ, ಧರ್ಮದ ವ್ಯಕ್ತಿಗಳಿಗೆ ಅವರದೇ ಆದ ಮಸೀದಿ, ದೇವಸ್ಥಾನ, ಚರ್ಚ್‌ಗಳಿವೆ. ಆದರೆ ಸಮಸ್ತ ರೈತರಿಗೆ ಆರ್ಥಿಕ ದೇವಸ್ಥಾನವೆಂದರೆ ಗ್ರಾಮದಲ್ಲಿರುವ ಸಹಕಾರಿ ಸಂಘಗಳ ಕಾರ್ಯಾಲಯಗಳಾಗಿವೆ. ದೇವರು, ರಾಜಕಾರಣಿಗಳಿಗಿಂತ ರೈತ ಮತ್ತು ಗಡಿ ಕಾಯುವ ಸೈನಿಕನಿಗೆ ಗೌರವ ಕೊಡಿ. ಇಲ್ಲದಿದ್ದರೆ ದೇಶದ ಸುರಕ್ಷತೆ ಮತ್ತು ಹೊಟ್ಟೆಗೆ ಅನ್ನವಿಲ್ಲದೆ ನರಳಾಡುವಂತಾದೀತು ಎಂದರು. ಹೊಸೂರಿನ ಗುರು ಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜಿಪಂ ಸದಸ್ಯ ಶಂಕರ ಮಾಡಲಗಿ, ಕಲಾವಿದ ಸಿ.ಕೆ.ಮೆಕ್ಕೇದ, ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ವಕೀಲ ಶ್ರೀಶೈಲ ಅಬ್ಬಾಯಿ ಮಾತನಾಡಿದರು. ಗುರು ಮಡಿವಾಳೇಶ್ವರಮಠದ ಮೃತ್ಯುಂಜಯ ಸ್ವಾಮೀಜಿ, ಗುರುಪಾದ ಕಳ್ಳಿ, ಗುರು ಮೆಟಗುಡ್ಡ, ಶಂಕರಗೌಡ ಪಾಟೀಲ, ಆನಂದ ಜಕಾತಿ, ಸುನೀಲ ಮರಕುಂಬಿ, ಗ್ರಾಪಂ ಅಧ್ಯಕ್ಷ ಪರ್ವತಗೌಡ ಪಾಟೀಲ, ಉಪಾಧ್ಯಕ್ಷೆ ಭಾರತಿ ಇಳಿಗೇರ, ಅಮಿತ ಪಾಟೀಲ, ಗಂಗಾಧರ ಕಲಬಾವಿ, ಅಶೋಕ ಪಟ್ಟಿಹಾಳ, ಮಡಿವಾಳಪ್ಪ ಹೊಳಿ, ಬಸವರಾಜ ಕರಡಿಗುದ್ದಿ ಇತರರು ಇದ್ದರು. ಅರಬಾವಿ ದುರದುಂಡೇಶ್ವರಮಠದ ಸಿದ್ದಲಿಂಗ ಸ್ವಾಮೀಜಿ ಕಟ್ಟಡವನ್ನು ಅನಾವರಣಗೊಳಿಸಿದರು.
ಪರಪ್ಪ ಬಾಳಿಕಾಯಿ ಸ್ವಾಗತಿಸಿದರು, ದುಂಡಪ್ಪ ಕಲಬಾವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net