

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದರೆ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಲ್ಲಿ ಜಿಲ್ಲೆಯಿಂದ ಯಾರು ಮಂತ್ರಿ ಸ್ಥಾನ ಪಡೆಯಲಿದ್ದಾರೆಂಬ ಗುಸುಗುಸು ಚರ್ಚೆ ಜಿಲ್ಲಾ ಬಿಜೆಪಿಯಲ್ಲೀಗ ಆರಂಭವಾಗಿದೆ.
ಯಡಿಯೂರಪ್ಪ ಸಂಪುಟದಲ್ಲಿ ಅತ್ಯಂತ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುತ್ತಿರುವ ಜೆ.ಸಿ.ಮಾಧುಸ್ವಾಮಿ ಅವರಿಗೆ ‘ಮಂತ್ರಿಗಿರಿ’ ಕೈತಪ್ಪುವುದಿಲ್ಲವೆಂಬ ಸಾಧ್ಯತೆ ನಡುವೆಯೂ ಆರ್‌ಎಸ್‌ಎಸ್ ಕೃಪಕಟಾಕ್ಷ ಹೊಂದಿರುವ ತಿಪಟೂರು ಶಾಸಕ ಬಿ.ಸಿ.ನಾಗೇಶ್ ಮೊಗದಲ್ಲೊಂದು ಸಣ್ಣ ನಗುವಿನ ‘ಗೆರೆ’ ಕಾಣಲಾರಂಭಿಸಿದೆ.
ಜುಲೈ 26ಕ್ಕೆ ಬಿಜೆಪಿ ಸರ್ಕಾರ ಎರಡು ವರ್ಷ ಪೂರೈಸುವ ಸಂದರ್ಭದಲ್ಲೇ ಸಿಎಂ ಬದಲಾವಣೆ ವಿಷಯ ಬಿರುಗಾಳಿಯಂತೆ ಎದ್ದಿದ್ದು ಕಾರ್ಯಕರ್ತರು, ಮುಖಂಡರಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಈ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಎಸ್‌ವೈ ಉತ್ತರಾಧಿಕಾರಿ ರೇಸ್‌ನಲ್ಲಿ ಹಲವು ಹೆಸರು ಹರಿದಾಡುತ್ತಿವೆ. ಒಂದು ವೇಳೆ ಹೈಕಮಾಂಡ್, ಸಂಘ ಪರಿವಾರ ಸೂಚಿಸುವವರು ಸಿಎಂ ಆಗಿದ್ದೇ ಆದಲ್ಲಿ ಮುಂದಿನ ಸಂಪುಟದಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವುದು ಬಹುತೇಕ ನಿಶ್ಚಿತವೆನಿಸಿದೆ.
ಇಬ್ಬರಿಗೆ ಮಂತ್ರಿ ಯೋಗ ?: ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದು ಇಬ್ಬರಿಗೆ ಮಂತ್ರಿ ಯೋಗ ದೊರೆಯುವ ಲೆಕ್ಕಾಚಾರಗಳು ಪಕ್ಷದ ವಲಯದಲ್ಲಿ ಇದೆಯಾದರೂ ಬಾಂಬೆ ಬಾಯ್ಸ ಟೀಂನಲ್ಲಿ ಎಲ್ಲರಿಗೂ ಮಣೆ ಹಾಕಲೇಬೇಕಿರುವುದರಿಂದ ಒಬ್ಬರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಹಾಗಾಗಿ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನ, ಬಿಜೆಪಿ ಸರ್ಕಾರ ರಚನೆ ವೇಳೆ ಸದನದ ಒಳಗೆ, ಹೊರಗೆ ಪಕ್ಷವನ್ನು ಸಮರ್ಥಿಸಿಕೊಂಡ ಮಾಧುಸ್ವಾಮಿ ಅವರಿಗೆ ಹೊಸ ಮಂತ್ರಿಮಂಡಲದಲ್ಲಿ ಗುರುತರ ಹೊಣೆಯನ್ನು ಪಕ್ಷದ ವರಿಷ್ಠರು ನೀಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಈ ಮಧ್ಯೆ ಪಕ್ಷನಿಷ್ಠ ಶಾಸಕ ಬಿ.ಸಿ.ನಾಗೇಶ್ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮಂಚೂಣಿಯಲ್ಲಿದ್ದಾರೆ. ಸಿಎಂ ಯಡಿಯೂರಪ್ಪ ಕೊಟ್ಟಿದ್ದ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಹಾಗೂ ಕಾರ್ಮಿಕ ಮಂಡಳಿ ಅಧ್ಯಕ್ಷ ಸ್ಥಾನವನ್ನು ಸಾರಸಗಟಾಗಿ ತಿರಸ್ಕರಿಸುವ ಮೂಲಕ ಮಂತ್ರಿಗಿರಿ ಮೇಲೆ ಕಣ್ಣಿಟ್ಟಿದ್ದ ನಾಗೇಶ್‌ಗೆ ಈಗ ಕನಸು ನನಸಾಗುವ ಕಾಲಸನ್ನಿಹಿತವಾಗಿದೆ. 2008 ಹಾಗೂ 2018ರಲ್ಲಿ ವಿಧಾನಸಭೆ ಪ್ರವೇಶಿಸಿರುವ ನಾಗೇಶ್ ಎಂದೂ ಅಧಿಕಾರಕ್ಕೆ ಹಾತೊರೆಯದೆ, ಲಾಬಿ ನಡೆಸದೆ ದೂರ ಉಳಿದಿರುವುದು ಪ್ಲಸ್ ಪಾಯಿಂಟ್ ಎನಿಸಿದೆ.
ತುರುವೇಕೆರೆ ಶಾಸಕ ಮಸಾಲ ಜಯರಾಂ, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಶಿರಾ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿರುವ ಹೊಸ ಮುಖಗಳಾಗಿದ್ದು ಯಾರಾದರೂ ಒಬ್ಬರಿಗೆ ಯುವ ಕೋಟಾದಲ್ಲಿ ಲಾಟರಿ ಹೊಡೆದು ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದು ಅವರ ಅಭಿಮಾನಿಗಳ ಮಹಾದಾಸೆಯಾಗಿದೆ.
ಡಾರ್ಕ್ ಹಾರ್ಸ್ ಮಾಧುಸ್ವಾಮಿ: ಸಿಎಂ ರೇಸ್‌ನಲ್ಲಿ ಜೆ.ಸಿ.ಮಾಧುಸ್ವಾಮಿ ಡಾರ್ಕ್ ಹಾರ್ಸ್ ಎನಿಸಿದ್ದಾರೆ. ಕ್ಲೀನ್ ಇಮೇಜ್ ಉಳಿಸಿಕೊಂಡಿರುವ ಮಾಧುಸ್ವಾಮಿಗೆ ನಿಷ್ಠುರ ನಡೆ-ನುಡಿ ಉನ್ನತ ಹುದ್ದೆಗೇರಲಿಕ್ಕೆ ಪ್ರಮುಖ ಹರ್ಡಲ್ಸ್ ಆಗಿದೆ. ಬಿಎಸ್‌ವೈಗೆ ಬರೆದಿರುವ ಪತ್ರದಲ್ಲಿ ನಿಡುಮಾಮಿಡಿ ಶ್ರೀಗಳು ನೊಳಂಬ ಸಮುದಾಯದ ಮಾಧುಸ್ವಾಮಿ ಹೆಸರನ್ನು ಸಿಎಂ ಹುದ್ದೆಗೆ ಪ್ರಸ್ತಾಪಿಸಿರುವುದು ಅವರ ಹಿತೈಷಿಗಳು, ಅಭಿಮಾನಿಗಳಲ್ಲಿ ದೊಡ್ಡ ಕನಸು ಬಿತ್ತಿದೆ. ಮಾಧುಸ್ವಾಮಿ ಬುದ್ಧಿವಂತರು, ಕೆಲಸಗಾರರು. ಆದರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವ ಗುಣ ಅವರಿಗಿನ್ನೂ ಬರಬೇಕಿದೆ ಎಂಬ ಎಚ್ಚರಿಕೆ ಮಾತುಗಳನ್ನು ಶ್ರೀಗಳು ಆಡಿದ್ದಾರೆ.
ನಾಗೇಶ್ ಪಕ್ಷ ನಿಷ್ಠೆ, ಸರಳತೆ : ತಿಪಟೂರು ಕ್ಷೇತ್ರ ಪ್ರತಿನಿಧಿಸುವ, ಬಿಇ., ಪದವೀಧರ ಬಿ.ಸಿ.ನಾಗೇಶ್ 2008, 2018ರಲ್ಲಿ ವಿಧಾನಸಭೆ ಪ್ರವೇಶಿಸಿದ್ದು ಜುಲೈ 1ಕ್ಕೆ 62ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದಾರೆ. ನಾಗೇಶ್ ತಂದೆ ಬಿ.ಎಸ್.ಚಂದ್ರಶೇಖರಯ್ಯ ಅವರು 1985ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿದ್ದರು. ನಂತರ 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಸೋತಿದ್ದರು. ತಂದೆ ಬಳಿಕ ರಾಜಕಾರಣಕ್ಕೆ ಕಾಲಿಟ್ಟ ನಾಗೇಶ್ 2003ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಬ್ರಾಹ್ಮಣ ಸಮುದಾಯದ ನಾಗೇಶ್‌ಗೆ ಪಕ್ಷನಿಷ್ಠ ಎಂಬುದರ ಜತೆಗೆ ಆರ್‌ಎಸ್‌ಎಸ್ ಮುಖಂಡರ ಶ್ರೀರಕ್ಷೆ ಇದೆ.
ಕುಂಚಿಟಿಗರ ಕೋಟಾ : ಕುಂಚಿಟಿಗರ ಕೋಟಾದಡಿ ಶಿರಾ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಹಾಗೂ ಎಂಎಲ್ಸಿ ಚಿದಾನಂದ ಎಂ ಗೌಡ ಸಹ ಸಚಿವ ಸ್ಥಾನಕ್ಕೆ ಲಾಬಿ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ. ಪೇಮೆಂಟ್, ಜಾತಿ ಕೋಟಾದಡಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಚರ್ಚೆಗಳು ಕಾರ್ಯಕರ್ತರಲ್ಲಿ ನಡೆದಿದೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಕುಂಚಿಟಿಗ ಸಮುದಾಯವನ್ನು ಸೆಳೆಯಲು ಶಿರಾ ಶಾಸಕ ರಾಜೇಶ್‌ಗೌಡ ಅವರಿಗೂ ಒಂದು ಚಾನ್ಸ್ ಸಿಕ್ಕರೆ ಆಶ್ಚರ್ಯ ಪಡುವಂತಿಲ್ಲ.