

ಮಡಿಕೇರಿ:
ಇತ್ತೀಚಿನ ದಿನಗಳಲ್ಲಿ ಸಹಕಾರಿ ರಂಗದಲ್ಲಿ ರಾಜಕೀಯ ನುಸುಳುತ್ತಿರುವ ಬಗ್ಗೆ ಗಣ್ಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವ ನೆನಪಿಗೆ ನಿರ್ಮಿಸಿರುವ ’ಉನ್ನತಿ ಭವನ’ ಕಟ್ಟಡ ಉದ್ಘಾಟನೆ ನಂತರ ಭಾನುವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಹುತೇಕ ಅತಿಥಿಗಳು ಸಹಕಾರಿ ಕ್ಷೇತ್ರಲ್ಲಿ ನಡೆಯುತ್ತಿರುವ ರಾಜಕೀಯ ಆಟದ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದರು.
ಮಾಜಿ ಸಚಿವರೂ ಆಗಿರುವ ಹಿರಿಯ ಸಹಕಾರಿ ಎಂ.ಸಿ. ನಾಣಯ್ಯ ತಮ್ಮ ಭಾಷಣದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದಲ್ಲಿ ಸಹಕಾರಿ ಸಚಿವರ ನೇಮಕ ಆಗಿದ್ದು, ದೆಹಲಿಯಲ್ಲಿ ಸಹಕಾರಿ ಕಾನೂನು ರಚನೆ ಮಾಡಿ ಎಲ್ಲಾ ರಾಜ್ಯಗಳ ಮೇಲೂ ಹೇರಲು ನೋಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಒಳಗೆ ಕಾರ್ಯಾಚರಿಸುವ ಸಹಕಾರಿ ಸಂಘಗಳಲ್ಲಿ ಕೇಂದ್ರದ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ ಎನ್ನುವುದನ್ನು ನ್ಯಾಯಾಲಯವೇ ಹೇಳಿದೆ. ಆದರೂ ಕೇಂದ್ರ ಸರ್ಕಾರ ಸಹಕಾರಿ ಸಂಘಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಹೊರಟಿರುವುದನ್ನು ಎಲ್ಲಾ ಸಹಕಾರಿಗಳು ಗಂಭೀರವಾಗಿ ಯೋಚಿಸಬೇಕಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬಾರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರಾಜಕಾರಣಿಗಳ ಮೇಲಿದೆ ಎಂದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಕೂಡ ಸಹಕಾರಿ ರಂಗದಲ್ಲಿ ರಾಜಕೀಯ ಇರಬಾರದು ಎನ್ನುತ್ತಲೇ ತಮ್ಮ ಮಾತು ಶುರು ಮಾಡಿದರು. ಹಲವು ಸಹಕಾರಿಗಳ ಶ್ರಮದಿಂದ ಬ್ಯಾಂಕ್ ಈ ಮಟ್ಟಕ್ಕೆ ಬೆಳೆದಿದೆ. ಇಂಥ ಶ್ರಮಿಕರನ್ನು ಮರೆಯಬಾರದು. ಕೊಡಗು ಭೌಗೋಳಿಕವಾಗಿ ಸಣ್ಣ ಜಿಲ್ಲೆಯಾದರೂ ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ಸಹಕಾರಿ ಕ್ಷೇತ್ರ ಪ್ರಜಾಪ್ರಭುತ್ವದ ಮೊದಲ ಮೆಟ್ಟಿಲು. ಇದನ್ನು ರಕ್ಷಿಸುವ ಕೆಲಸ ಆಗಬೇಕು. ಸಹಕಾರಿ ಸಂಸ್ಥೆಗಳಲ್ಲಿ ಪ್ರಾಮಾಣಿಕ ಸೇವೆ ಇರಬೇಕು. ಕೊಡಗಿನ ಸಹಕಾರಿ ಸಂಘಗಳು ಇದರಲ್ಲಿ ಮಾದರಿ ಆಗಿವೆ. ಸಹಕಾರಿ ಕ್ಷೇತ್ರಕ್ಕೆ ಎಂ.ಸಿ. ನಾಣಯ್ಯ ಕೊಡುಗೆ ಮರೆಯುವಂತಿಲ್ಲ. ಸರ್ಕಾರಗಳು ಮಾಡದ ಕೆಲಸ ಸಹಕಾರಿ ಸಂಘಗಳಿಂದ ಆಗುತ್ತಿದೆ ಎಂದರು.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋಲಿಸಿದರೆ ಡಿಸಿಸಿ ಬ್ಯಾಂಕ್ ಸೇರಿದಂತೆ ಸಹಕಾರಿ ಬ್ಯಾಂಕ್‌ಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಗ್ರಾಹಕರ ಜತೆ ನೇರವಾಗಿ ಆತ್ಮೀಯವಾಗಿ ಸಂಬಂಧ ಹೊಂದಿರುವುದರಿಂದ ವ್ಯವಹಾರಗಳು ಉತ್ತಮವಾಗಿ ನಡೆಯುತ್ತವೆ. ಆಪ್ತ ಸಂಬಂಧಗಳು ಬೆಳೆಯುತ್ತವೆ ಎಂದು ಹೇಳಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಜನಪ್ರತಿನಿಧಿಗಳು ನೇರವಾಗಿ ಜನತೆಗೆ ನೆರವು ಕೊಡಲು ಆಗುವುದಿಲ್ಲ. ಈ ಅವಕಾಶ ಸಹಕಾರ ರಂಗದಲ್ಲಿ ಇದೆ. ಬ್ಯಾಂಕ್‌ಗಳಲ್ಲಿ ತಂತ್ರಜ್ಞಾನ ಸುಧಾರಿಸಬೇಕು. ಆಧುನಿಕ ಜನಮಾನಕ್ಕೆ ತಕ್ಕುದಾದ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ ಚಿಕ್ಕ ಸಾಲ ಕೊಟ್ಟರೆ ಮಾತ್ರ ಸಹಕಾರ ಸಂಘಗಳಿಗೆ ಅನುಕೂಲ ಆಗುತ್ತದೆ. ದೊಡ್ಡ ಮೊತ್ತದ ಸಾಲಗಳನ್ನು ಪಡೆದವರು ವಂಚಿಸುವುದೇ ಹೆಚ್ಚು. ಈ ಬಗ್ಗೆ ಸಹಕಾರಿ ಸಂಘಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಡಂದೇರ ಬಾಂಡ್ ಗಣಪತಿ ಮಾತನಾಡಿ ಗ್ರಾಹಕರಿಗೆ ಸಕಾಲದಲ್ಲಿ ಸಾಲ ವಿತರಣೆ ಮತ್ತು ಸಾಲಗಾರರು ಪಡೆದ ಸಾಲ ಸಕಾಲದಲ್ಲಿ ಮರುಪಾವತಿ ಆಗುವುದರಿಂದ ಸಹಕಾರಿ ಬ್ಯಾಂಕ್ ಪ್ರಗರಿ ಕಾಣುತ್ತದೆ. ಪ್ರಸ್ತುತ ವರ್ಷದಿಂದ ಬ್ಯಾಂಕ್ ಮೂಲಕ ವಿದ್ಯಾಭ್ಯಾಸ ಸಾಲ ಆರಂಭಿಸಲಾಗಿದೆ. ಬ್ಯಾಂಕಿನ ಸಿಬ್ಬಂದಿ ನಿವೃತ್ತರಾದ ನಂತರ ನೆಮ್ಮದಿಯಾಗಿ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ೩.೫ ಕೋಟಿ ರೂ. ಮೊತ್ತದಲ್ಲಿ ಸಿಬ್ಬಂದಿ ನಿವೃತ್ತಿ ವೇತನ ಠೇವಣಿ ಇರಿಸಲಾಗಿದೆ. ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ೫ ಲಕ್ಷ ರೂ. ತನಕದ ಆರೋಗ್ಯ ವಿಮೆಯನ್ನೂ ಮಾಡಿಸಲಾಗಿದೆ. ಶತಮಾನೋತ್ಸವ ಕಟ್ಟಡವನ್ನು ೮.೪೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶತಮಾನೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕೃಷಿ ಯಂತ್ರೋಪಕರಣ ಮತ್ತು ವಾಹನ ಸಾಲ ಮೇಳದಲ್ಲಿ ೩೪೯ ನಾಲ್ಕು ಚಕ್ರದ ವಾಹನ, ೯೪ ದ್ವಿಚಕ್ರ ವಾಹನ ಸೇರಿ ೫೭೭ ವಾಹನಗಳಿಗೆ ಒಟ್ಟು ೪೦ ಕೋಟಿ ರೂ. ಸಾಲ ಕೇವಲ ೨ ದಿನದಲ್ಲಿ ಕೊಡಲಾಗಿದೆ ಎಂದರು.
ವಿಧಾನಪರಿಷತ್ತು ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿದರು. ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಸಹಕಾರ ಸಂಘಗಳ ಹಿರಿಯ ಅಧಿಕಾರಿ ಎಸ್.ಸಿ. ದಿವಾಕರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ರಮೇಶ್ ಬಾಬು, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಮಣವಟ್ಟಿರ ಬೆಳ್ಯಪ್ಪ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಕೆಡಿಸಿಸಿ ಉಪಾದ್ಯಕ್ಷ ಕೇಟೋಳೀರ ಹರೀಶ್ ಪೂವಯ್ಯ, ಬ್ಯಾಂಕಿನ ನಿರ್ದೇಶಕರು ವೇದಿಕೆಯಲ್ಲಿ ಇದ್ದರು.