ಭೂ ಮಂಜೂರಾತಿಯಲ್ಲೂ ರಾಜಕೀಯ!

land
ಸಕ್ರಮಕ್ಕಾಗಿ ಎದುರು ನೋಡುತ್ತಿರುವ ಕೃಷಿ ಭೂಮಿ.
Published on

ಅರವಿಂದ ಅಕ್ಲಾಪುರ ಶಿವಮೊಗ್ಗ
ಕಂದಾಯ-ಅರಣ್ಯಭೂಮಿ ಸಮಸ್ಯೆ ಮಿತಿಮೀರಿದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು, ಆಡಳಿತ ಯಂತ್ರ ನಿರಾಸಕ್ತಿ ತೋರುತ್ತಿರುವುದು ವಿಪರ್ಯಾಸದ ಸಂಗತಿ. ಇದರಿಂದ ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರು ಸದಾ ಆತಂಕದಲ್ಲೇ ದಿನದೂಡುವ ಸ್ಥಿತಿ ನಿರ್ಮಾಣವಾಗಿದೆ.

ಸಾಗುವಳಿದಾರರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪದೇಪದೆ ಅರ್ಜಿ ಸಲ್ಲಿಕೆ ಅವಕಾಶ ನೀಡಿದ ಸರ್ಕಾರಗಳು ಸಾಗುವಳಿ ಚೀಟಿ ಹಂಚಿಕೆಗೆ ತಾರ್ಕಿಕ ಅಂತ್ಯ ಹಾಡಲು ಉದಾಸೀನ ತೋರುತ್ತಿವೆ. ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದನ್ನೇ ತಮ್ಮ ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಿವೆ.
ಫಾರ್ಮ್ ನಂ 50, 53 ಹಾಗೂ 57ರಡಿ ಬಗರ್‌ಹುಕುಂ ಸಾಗುವಳಿದಾರರು ಸಲ್ಲಿಸಿದ ಅರ್ಜಿಗಳು ಧೂಳು ತಿನ್ನುತ್ತಿವೆ. ಇದುವರೆಗೆ 39 ಸಾವಿರ ಅರ್ಜಿಗಳಿಗೆ ಮಾತ್ರ ಸಾಗುವಳಿ ಚೀಟಿ ಸಿಕ್ಕಿದೆ. ಇದರ 10 ಪಟ್ಟು ಅರ್ಜಿಗಳು ತಿರಸ್ಕೃತವಾಗಿವೆ. ಸಲ್ಲಿಕೆಯಾದ ಅರ್ಜಿಗಳು ಪರಿಶೀಲನೆ ಹಂತದಲ್ಲಿದ್ದರೆ ಮಾತ್ರ ಸಾಗುವಳಿದಾರರಿಗೆ ಕೊಂಚ ರಿಲೀಫ್.
ಒಂದು ವೇಳೆ ತಾವು ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದ್ದರೆ ಯಾವ ಸಂದರ್ಭದಲ್ಲಿ ಬೇಕಾದರೂ ಆಡಳಿತ ಯಂತ್ರ ಅದನ್ನು ತೆರವು ಮಾಡಬಹುದು. ಅದರೂ ಹಳ್ಳಿಗಳಲ್ಲಿ ಪರಸ್ಪರ ವೈಷಮ್ಯದಿಂದ ಅಧಿಕಾರಿಗಳಿಗೆ ದೂರು ನೀಡುವವರಿಗೆ ಕೊರತೆಯೇನಿಲ್ಲ. ಹೀಗೆ ಸಲ್ಲಿಕೆಯಾದ ದೂರು ಕೋರ್ಟ್ ಮೆಟ್ಟಿಲೇರಿ ಅಲ್ಲಿಂದ ತೆರವಿನ ಆದೇಶ ಬಂದರೆ ಸಾಗುವಳಿದಾರರು ಕೈಕಟ್ಟಿ ಕೂರಬೇಕಾಗುತ್ತದೆ.
ಈಗ ಕಂದಾಯ ಸಚಿವ ಕೃಷ್ಣಬೈರೇಗೌಡ ಕಂದಾಯ ಭೂಮಿ ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಷ್ಟು ದಿನ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರು ತೆರವಿನ ಭೀತಿ ಎದುರಿಸುತ್ತಿದ್ದರು. ಈಗ ಕಂದಾಯ ಭೂಮಿಯಲ್ಲಿ ಇರುವವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅವಧಿ ವಿಸ್ತರಣೆ:ನಮೂನೆ-57ರಡಿ ಅರ್ಜಿ ಸಲ್ಲಿಕೆಗೆ ಒಂದು ವರ್ಷ ಅವಧಿ ವಿಸ್ತರಿಸಿ 2022ರ ಮೇ 30ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಅರ್ಜಿ ವಿಲೇವಾರಿಗೆ ಸಮಯ ನಿಗದಿ ಮಾಡದ ಕಾರಣ ಸಾಗುವಳಿ ಚೀಟಿ ವಿತರಣೆಗೆ ಕಾಲಕೂಡಿ ಬರಲಿಲ್ಲ. ಹಿಂದೆ ಅರ್ಜಿ ತಿರಸ್ಕೃತಗೊಂಡವರಿಗೆ ಮತ್ತೊಂದು ಬಾರಿ ಅರ್ಜಿ ಸಲ್ಲಿಸಲು ಮಾತ್ರ ಇದರಿಂದ ಅನುಕೂಲವಾಯಿತು. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಅರಣ್ಯ ಹಕ್ಕು ಕಾಯ್ದೆ, ಬಗರ್‌ಹುಕುಂ ಅರ್ಜಿಗಳ ವಿಲೇವಾರಿಗೆ ಹೆಚ್ಚು ಒತ್ತು ನೀಡಿದರೂ ಅದರಿಂದ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ.
ಹಲವು ಕಾರಣಗಳು:ಸಲ್ಲಿಕೆಯಾದ ಅರ್ಜಿಗಳ ಪೈಕಿ ಗರಿಷ್ಠ ಪ್ರಮಾಣದ ಅರ್ಜಿಗಳು ತಿರಸ್ಕೃತವಾಗುತ್ತವೆ. ಇನ್ನು ಕೆಲವು ವಿಲೇವಾರಿ ಹಂತದಲ್ಲೇ ಉಳಿಯುತ್ತವೆ. ಸಕಾಲದಲ್ಲಿ ಬಗರ್‌ಹುಕುಂ ಸಕ್ರಮ ಸಮಿತಿ ರಚನೆ ಆಗದಿರುವುದರಿಂದ ಬಗರ್‌ಹುಕುಂ ಸಕ್ರಮ ಎಂಬುದು ರೈತರಿಗೆ ಕನ್ನಡಿಯೊಳಗಿನ ಗಂಟಿನಂತಾಗಿದೆ. ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಬಗರ್‌ಹುಕುಂ ಸಮಿತಿ ರಚನೆಯಾಗಬೇಕು. ಆ ಸಮಿತಿ ಕಾಲಕಾಲಕ್ಕೆ ಸಭೆ ಮಾಡಿ, ಅರ್ಜಿಗಳನ್ನು ಪರಿಶೀಲಿಸಿ ಇತ್ಯರ್ಥ ಮಾಡಬೇಕು. ಆದರೆ ಈ ಪ್ರಕ್ರಿಯೆ ಸರಿಯಾಗಿ ನಡೆದಿದ್ದೇ ಕಡಿಮೆ. ವರ್ಷಕೊಮ್ಮೆ ತಿಂಗಳು ಕಾಲ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಆ ಸಂದರ್ಭ ಬಗರ್‌ಹುಕುಂ ಸಮಿತಿ ಸಭೆಗಳನ್ನೂ ನಡೆಸುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net