

ಮಂಗಳೂರು: ಕೋವಿಡ್ ಲಸಿಕೆ, ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿಯಿಂದ ಆಹಾರ ಪೊಟ್ಟಣ ವಿತರಣೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಅನ್ನು ಐಸಿಯು ವಾಹನವಾಗಿ ಪರಿವರ್ತಿಸಿ ನಡೆಸುವ ಆರೋಗ್ಯ ತಪಾಸಣೆಯನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ಪರಿವರ್ತಿಸಿಕೊಂಡಿದೆ. ಪ್ರತಿಪಕ್ಷ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಉದ್ದೇಶಪೂರ್ವಕವಾಗಿ ಈ ಕಾರ್ಯಕ್ರಮಗಳಿಂದ ದೂರವಿಡಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಕಾಂಗ್ರೆಸ್‌ಪಾಲಿಕೆ ಸದಸ್ಯರು ಇರುವ ಕಡೆ ಸದಸ್ಯರಿಗೆ ಮಾಹಿತಿ ಕೂಡ ನೀಡುತ್ತಿಲ್ಲ. ಬಿಜೆಪಿ ಸದಸ್ಯರು ಇರುವ ಕಡೆ ಅವರ ನೇತೃತ್ವದಲ್ಲೇ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿಯಿಂದ ವಿತರಿಸಲಾದ ಆಹಾರ ಪೊಟ್ಟಣಗಳನ್ನು ಬಂಟ್ವಾಳ ತಾಲೂಕಿನ ಕಿರಾಣಿ ಅಂಗಡಿಯಲ್ಲಿ ಮಾರಾಟಕ್ಕೆ ಇಡಲಾಗಿದೆ. ಹಲವು ಕಡೆಗಳಲ್ಲಿ ಇಂತಹ ಆಹಾರ ಪೊಟ್ಟಣಗಳನ್ನು ಬಿಜೆಪಿ ನಾಯಕರು ಅಥವಾ ಕಾರ್ಯಕರ್ತರ ಮನೆಗಳಲ್ಲಿ ದಾಸ್ತಾನು ಇಡಲಾಗಿದೆ. ಬಿಜೆಪಿ ಆಡಳಿತ ಇರುವಲ್ಲಿ ಗ್ರಾಪಂಗಳಿಂದ ಆಹಾರ ಪೊಟ್ಟಣಗಳನ್ನು ವಿತರಿಸಿದರೆ, ಕಾಂಗ್ರೆಸ್ ಆಡಳಿತ ಇರುವ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ದಾಸ್ತಾನು ಇರಿಸಿರುವುದು ಕಂಡುಬಂದಿದೆ ಎಂದು ಅವರು ಆಕ್ಷೇಪಿಸಿದರು.
ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ ಮೂಲಕ ಆಹಾರ ಪೊಟ್ಟಣಗಳನ್ನು ವಿತರಿಸುವುದು ಸರಿಯಾದ ಮಾರ್ಗ. ಕೆಎಸ್‌ಆರ್‌ಟಿಸಿ ಬಸ್ಸನ್ನು ಐಸಿಯು ಆಗಿ ಪರಿವರ್ತಿಸಿ ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯ ತಪಾಸಣೆ ಕಾರ್ಯದಲ್ಲೂ ಇದೇ ರೀತಿ ರಾಜಕೀಯ ನಡೆಯುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕಾದ ಅಧಿಕಾರಿಗಳು ಕೂಡ ಮೌನವಹಿಸಿದ್ದಾರೆ ಎಂದು ಅವರು ದೂರಿದರು.
ಬಂದರು ಕಾರ್ಪೊರೇಟರ್ ಲತೀಫ್ ಅವರ ಕ್ಷೇತ್ರದಲ್ಲಿ ಆರಂಭದಲ್ಲಿ 500 ಮಂದಿಗೆ ಲಸಿಕೆ ನೀಡಲು ನಿರ್ಧರಿಸಲಾಗಿತ್ತು. ಎರಡು ದಿನಗಳಿಗೆ ಮೊದಲು 300 ಎಂದು ಹೇಳಿ, ಬಳಿಕ 200 ಲಸಿಕೆ ಹೇಳಲಾಯಿತು. ಲಸಿಕೆ ನೀಡುವ ದಿನದ ಹಿಂದಿನ ದಿನ ರಾತ್ರಿ ಕರೆ ಮಾಡಿ ನಾಳೆ ಲಸಿಕೆ ಕಾರ್ಯಕ್ರಮ ರದ್ದು ಎಂದು ಹೇಳುವ ಮೂಲಕ ಅದಾಗಲೇ ಮಾಹಿತಿಯನ್ನು ನೀಡಲಾಗಿದ್ದ ಜನರಲ್ಲಿ ಗೊಂದಲ ಸೃಷ್ಟಿಸಲಾಯಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಶಾಹುಲ್ ಹಮೀದ್, ಅಬ್ಬಾಸ್, ಲಾರೆನ್ಸ್ ಡಿಸೋಜಾ, ಸುಧೀರ್ ಟಿ.ಕೆ., ನೀರಜ್ ಪಾಲ್, ಶಬೀರ್ ಉಪಸ್ಥಿತರಿದ್ದರು.