ಬಂಗಾರಪೇಟೆಯಲ್ಲಿ ಗರಿಗೆದರಿದ ರಾಜಕೀಯ

bjpjds_vb_79
Published on

ವಿ.ಶಿವಾರೆಡ್ಡಿ ಬಂಗಾರಪೇಟೆ: ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ಬಂಗಾರಪೇಟೆ ಕ್ಷೇತ್ರದಲ್ಲಿ ಈಗಿನಿಂದಲೇ ತಾಲೀಮು ಶುರುವಾಗಿದೆ.

ಮೂರು ಪಕ್ಷಗಳಲ್ಲಿ ಈಗಲೇ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಅದರಲ್ಲೂ ಮೈತ್ರಿ ಪಕ್ಷಗಳಲ್ಲಿ ಸ್ಪರ್ಧಿಸಲು ಟಿಕೆಟ್​ಗಾಗಿ ತೆರೆಮೆರೆಯಲ್ಲಿ ಲಾಬಿ ಆರಂಭಿಸಲಾಗಿದೆ.

ಕಾಂಗ್ರೆಸ್​ನಿಂದ ದೂರ ಹೋಗಿದ್ದ ಮುಖಂಡರನ್ನು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಗುರುತಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ರಾಜಕೀಯ ಧೃವೀಕರಣ ಪ್ರಾರಂಭಿಸಿದ್ದಾರೆ. ಈ ಬೆನ್ನಲ್ಲೇ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಬಿಜೆಪಿ ಸಖ್ಯ ಬಿಟ್ಟು ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್​ ಕಡೆ ವಾಲಿದ್ದಾರೆ. ಶಾಸಕರ ಬೆಂಬಲಿಗರು ಜೆಡಿಎಸ್​ ಮತ್ತು ಬಿಜೆಪಿಯಲ್ಲಿನ ಅಸಮಾಧಾನಿತರನ್ನು ಕಾಂಗ್ರೆಸ್​ಗೆ ಕರೆತರಲು ಗುಪ್ತವಾಗಿಯೇ ಕೆಲಸ ಮಾಡುತ್ತಿದ್ದಾರೆ.

ಈ ಭಾಗದಲ್ಲಿ ರಾಜಕೀಯವಾಗಿ ಪ್ರಭಾವ ಇರುವ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಬೆಂಬಲಿಗರ ಮೇಲೆಯೇ ಕಾಂಗ್ರೆಸ್​ ಮುಖಂಡರು ಹೆಚ್ಚಾಗಿ ಗಮನ ಹರಿಸಿ, ಸೆಳೆಯಲು ನಡೆಸುತ್ತಿರುವ ಪ್ರಯತ್ನ ರಾಜಕೀಯದ ಹೊಸ ಬೆಳವಣಿಗೆಯಾಗಿದೆ.

ಎರಡು ಬಾರಿ ದಳದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಕೋಲಾರ ಹಾಲಿ ಸಂಸದ ಮಲ್ಲೇಶ್​ಬಾಬು ಜೆಡಿಎಸ್​ ಬಲಿಷ್ಠವಾಗಲು ಕಾರಣ. ಬಿಜೆಪಿಯಿಂದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮೊದಲ ಬಾರಿ ಗೆದಿದ್ದರು. ಕಾಂಗ್ರೆಸ್​ನಿಂದ ಗೆದ್ದಿದ್ದ ಎಂ.ನಾರಾಯಣಸ್ವಾಮಿ ಆಪರೇಷನ್​ ಕಮಲಕ್ಕೊಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಉಪ ಚುನಾವಣೆಯಲ್ಲಿ ಎರಡನೇ ಬಾರಿಗೆ ಬಂಗಾರಪೇಟೆಯಲ್ಲಿ ಬಿಜೆಪಿ ಬಾವುಟ ಹಾರಿದ್ದರು. ನಂತರ ಮೂರು ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಹ್ಯಾಟ್ರಿಕ್​ ಸಾಧನೆಯೊಂದಿಗೆ ಕಾಂಗ್ರೆಸ್​ ಕೋಟೆಗೆ ಯಾರೂ ಲಗ್ಗೆ ಹಾಕದಂತೆ ಭದ್ರ ಪಡಿಸಿಕೊಂಡಿದ್ದಾರೆ.

ಮೈತ್ರಿ ಶಕ್ತಿ

ಈ ಮಧ್ಯೆ ಮುಂದೆ ಬರಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಟಿಕೆಟ್​ಗಾಗಿ ಮೈತ್ರಿ ಮಧ್ಯೆ ತೆರೆಮರೆಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಪುತ್ರ, ಜಿಪಂ ಮಾಜಿ ಸದಸ್ಯ ಬಿ.ವೆ.ಮಹೇಶ್​ ಮತ್ತು ಜೆಡಿಎಸ್​ನಿಂದ ವಿ.ಶೇಷು ಕಸರತ್ತು ನಡೆಸುತ್ತಿದ್ದಾರೆ. ಮೊದಲಿಂದಲೂ ಬಿ.ವಿ.ಮಹೇಶ್​ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದು, ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್​ ಸರ್ಕಾರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಾಯಕತ್ವ ವಹಿಸಿದ್ದರು. ಚದುರಿ ಹೋಗಿದ್ದ ಮುಖಂಡರನ್ನು ಒಂದು ಮಾಡಿ ನಾವೆಲ್ಲ ಒಂದಾಗಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಿದ್ದರು. ಮತ್ತೊಂದು ಕಡೆ ವಿ.ಶೇಷು ಅವರು ಮುಖಂಡರ ಭೇಟಿ ಮಾಡಿ ಚರ್ಚಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೂತನ ಪಕ್ಷ ಕಟ್ಟಿದ್ದಾಗ "ತೆಂಗಿನಕಾಯಿ' ಚಿಹ್ನೆಯಿಂದ ಸ್ಪರ್ಧೆ ಮಾಡಿದ್ದರು. ಅದಕ್ಕೂ ಮುಂಚೆ ಜೆಡಿಎಸ್​ ಟಿಕೆಟ್​ನಿಂದ ಸ್ಪರ್ಧೆಗೆ ಇಳಿದಿದ್ದರು.

ಕಳೆದ 25 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಸಂಘಟನೆ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ಟಿಕೆಟ್​ ಆಕಾಂಕ್ಷಿಯಾಗಿದ್ದೆ. ಆದರೆ ಹೈಕಮಾಂಡ್​ ನೀಡಿದ ಭರವಸೆ ಮೇರೆಗೆ ಹಿಂದೆ ಸರಿದ ಕಾರಣ ಎಂ.ನಾರಾಯಣಸ್ವಾಮಿ ಅಭ್ಯರ್ಥಿ ಆದರು. ಮುಂದೆಯೂ ಅವರು ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಲ್ಲ.

>  ಬಿ.ವಿ.ಮಹೇಶ್, ಬಿಜೆಪಿ ಮುಖಂಡ, ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net