

ಬೇಲೂರು: ಅಭಿವೃದ್ಧಿ ಕೆಲಸಕ್ಕೆ ಸದಾ ಸಿದ್ಧರಿದ್ದು, ಪಕ್ಷ ಯಾವುದಿದ್ದರೂ ಇಂತಹ ಕೆಲಸಗಳಿಗೆ ಯಾವುದೇ ರಾಜಕೀಯ ಬೆರೆಸಬಾರದು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ದೇಶಾಣಿ ಆನಂದ್ ಹೇಳಿದರು.
ಲೋಕಸಭೆ ಸದಸ್ಯರ ಅನುದಾನದಡಿ 5 ಲಕ್ಷ ರೂ. ವೆಚ್ಚದಲ್ಲಿ ಅಡುಗೆಮನೆ ಮತ್ತು ಶೌಚಗೃಹ ನಿರ್ಮಾಣಕ್ಕೆ ಗುರುವಾರ ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ 5 ತಿಂಗಳ ಹಿಂದೆಯಷ್ಟೇ ಎಐಸಿಸಿ ಸದಸ್ಯ ಬಿ.ಶಿವರಾಮ್ ಅವರು ಹೆಬ್ಬಾಳು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಸಮುದಾಯ ಭವನ ಕಾಮಗಾರಿ ಅನುದಾನ ಕೊರತೆಯಿಂದ ಅರ್ಧಕ್ಕೆ ನಿಂತು ಹೋಗಿದ್ದನ್ನು ಗಮನಿಸಿ, ಲೋಕಸಭಾ ಸದಸ್ಯರಿಂದ ಅನುದಾನ ಕೊಡಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ 5 ಲಕ್ಷ ರೂ, ಅನುದಾನ ಕೊಡಿಸಿದ್ದಾರೆ. ಆದರೆ ಹೆಬ್ಬಾಳು ಗ್ರಾಮಸ್ಥರು ತಕ್ಷಣವೇ ಕಾಮಗಾರಿಗೆ ಭೂಮಿ ಪೂಜೆ ಆಯೋಜಿಸಿ ಆಹ್ವಾನಿಸಿದ್ದರು. ಈ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ ಸಂದರ್ಭ ಸಮಯದ ಅಭಾವದಿಂದ ಬರಲು ಸಾಧ್ಯವಾಗುತ್ತಿಲ್ಲ. ಭೂಮಿಪೂಜೆ ಮುಗಿಸಿ ಕಾಮಗಾರಿ ಮಾಡಲು ತಿಳಿಸಿದ್ದು, ಹೆಚ್ಚುವರಿ ಕಾಮಗಾರಿಗೆ ಹಣ ಬೇಕಿದ್ದಲ್ಲಿ ನೀಡುತ್ತೇನೆಂದು ಭರವಸೆ ನೀಡಿದ ಬಳಿಕ ಪೂಜೆ ನೆರವೇರಿಸಲಾಗಿದೆ. ಇದಕ್ಕೆ ಯಾವುದೇ ರಾಜಕೀಯ ಬೆರೆಸುವುದು ಬೇಡ. ಪಕ್ಷ ಯಾವುದಿದ್ದರೂ ಗ್ರಾಮಕ್ಕೆ ಕೆಲಸ ಮುಖ್ಯ ಎಂದರು.
ಅಲ್ಲದೆ ಬಂದಿರುವ ಅನುದಾನಕ್ಕೆ ಸೀಮಿತ ಅವಧಿ ಇದ್ದು, ಅದನ್ನು ಮೀರಿದರೆ ಸರ್ಕಾರಕ್ಕೆ ವಾಪಸ್ ಹೋಗುತ್ತದೆ. ಆದ್ದರಿಂದ
ಗ್ರಾಮಸ್ಥರ ಕೋರಿಕೆಯಂತೆ ಭೂಮಿ ಪೂಜೆ ನೆರವೇರಿಸಿದ್ದೇವೆ. ಗ್ಯಾರಂಟಿ ಅನುಷ್ಠಾನದಲ್ಲಿ ಲೋಪ ಕಂಡು ಬಂದಲ್ಲಿ ಗಮನಕ್ಕೆ ತಂದರೆ ಸರಿಪಡಿಸಲು ಮುಂದಾಗುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡ ಬಿ.ಎಂ.ಸಂತೋಷ್ ಮಾತನಾಡಿ, ಹೆಬ್ಬಾಳು ದೊಡ್ಡ ಗ್ರಾಮವಾಗಿದ್ದು ಇಲ್ಲಿಗೆ 5 ಲಕ್ಷ ರೂ. ಅನುದಾನ ಸಾಲುವುದಿಲ್ಲ. ಹೆಚ್ಚಿಗೆ ಅನುದಾನದ ಅವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಕ್ಕೂ ಅನುದಾನ ನೀಡುವಂತೆ ಸಂಸದರ ಬಳಿ ಚರ್ಚಿಸಿ ಅಭಿವೃದ್ಧಿಗೆ ಮುಂದಾಗಲಿದ್ದೇವೆ ಎಂದು ಹೇಳಿದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಪೈಂಟ್ ರವಿ, ಹೆಬ್ಬಾಳು ಉಮಾಶಂಕರ್, ಗ್ರಾಪಂ ಮಾಜಿ ಅಧ್ಯಕ್ಷ ವಿಜ್ಞೇಶ್, ಗ್ಯಾರಂಟಿ ಸಮಿತಿ ಸದಸ್ಯ ಸುರೇಶ್, ಗ್ರಾಮಸ್ಥರಾದ ನಂಜೇಗೌಡ, ತೀರ್ಥಪ್ಪ, ದೊಡ್ಡೇಗೌಡ, ನಾಗೇಶ್, ಈಶ್ವರ್, ರಾಕೇಶ್ ಇತರರು ಇದ್ದರು.