ರಾಜಕೀಯ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಲ್ಲ

Politics for selfishness Congress left BJP not included Belgaum
ಜಂಬಗಿ ಗ್ರಾಮದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ಶಾಸಕ ಶ್ರೀಮಂತ ಪಾಟೀಲ, ನಿಂಗಪ್ಪ ಕೋಲೆ, ತುಕಾರಾಮ ಮಾಡಿ, ಕರುಣೆ ಮಿರಿ, ತಮ್ಮಣ್ಣ ಪೂಜಾರಿ, ರವಿ ಪೂಜಾರಿ ಇತರರಿದ್ದರು.
Published on

ಸಂಬರಗಿ: ರಾಜಕೀಯ ಸ್ವಾರ್ಥಕ್ಕಾಗಿ ಬಿಜೆಪಿ ಸೇರಿಲ್ಲ. ನಮ್ಮ ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷ ಸೇರಿದ್ದೇವೆ. ಇದಕ್ಕೆ ನಮ್ಮ ಕ್ಷೇತ್ರದ ಜನರು ಬೆಂಬಲವಾಗಿ ನಿಂತಿದ್ದಾರೆ. ಚುನಾವಣೆಯಲ್ಲಿ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಠಳ್ಳಿ ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಸಮೀಪದ ಜಂಬಗಿ ಗ್ರಾಮದಲ್ಲಿ ಸೋಮವಾರ ಶಾಸಕ ಶ್ರೀಮಂತ ಪಾಟೀಲ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಬೆಳಗಾವಿ ಜಿಲ್ಲೆಯ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು ರಾಜೀನಾಮೆ ಸಲ್ಲಿಸಿ, ಮರು ಚುನಾವಣೆ ಮಾಡುವ ಮೂಲಕ ಬಿಜೆಪಿಯನ್ನು ಆಡಳಿತಕ್ಕೆ ತರುತ್ತೇವೆ ಎಂದರು.

ಅಥಣಿ ಮತ್ತು ಕಾಗವಾಡ ಕ್ಷೇತ್ರದಲ್ಲಿ ನೀರಾವರಿ ಯೋಜನೆ ನನೆಗುದಿಗೆ ಬೀಳಲು ರಾಜಕೀಯ ಕುತಂತ್ರ ಕಾರಣ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಶೀಘ್ರದಲ್ಲಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡುತ್ತೇವೆ. ಯಾರ ದಬ್ಬಾಳಿಕೆಗೂ ಹೆದರಬೇಡಿ ಎಂದರು.

ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ನಮ್ಮ ಬೆನ್ನೆಲುಬಾಗಿ ಯುವಶಕ್ತಿ ನಿಂತಿದೆ. ವಿರೋಧ ಪಕ್ಷದವರು ಸೋಲಿನ ಭೀತಿಯಲ್ಲಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮತದಾರರು 50 ಸಾವಿರ ಅಂತರದಿಂದ ನನ್ನನ್ನು ಗೆಲ್ಲಿಸುವ ಮೂಲಕ ವಿರೋಧಿಗಳಿಗೆ ಉತ್ತರ ನೀಡಲಿದ್ದಾರೆ ಎಂದರು.

ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಕೋಲೆ, ಗ್ರಾಪಂ ಮಾಜಿ ಅಧ್ಯಕ್ಷ ತುಕಾರಾಮ ಮಾಡಿ, ಕರುಣೆ ಮಿರಿ, ತಮ್ಮಣ್ಣ ಪೂಜಾರಿ, ರವಿ ಪೂಜಾರಿ, ಉತ್ತಮ ಪಾಟೀಲ, ದತ್ತಾ ಭೋಸಲೆ, ವಿನಾಯಕ ಪಾಟೀಲ, ಬಾಪು ಪಾಟೀಲ, ಸಂಜಯ ಜಾಧವ, ಸಾಗರ ಧರೇಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net