'ರಾಜಕಾರಣವನ್ನೇ ಉದ್ಯೋಗ ಮಾಡಿಕೊಳ್ಳುವುದು ಅಪಾಯ'

9
Published on

ಮೈಸೂರು: ರಾಜಕಾರಣವನ್ನೇ ಉದ್ಯೋಗ ಮಾಡಿಕೊಳ್ಳುವುದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಅಪಾಯಕಾರಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆತಂಕ ವ್ಯಕ್ತಪಡಿಸಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್‌ನಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯಮಿ ಹಾಗೂ ವೃತ್ತಿಪರರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ಜನರು ರಾಜಕಾರಣವನ್ನೇ ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡು ಅದನ್ನೇ ಸಂಪಾದನೆಯ ಮಾರ್ಗವನ್ನಾಗಿಸಿಕೊಂಡು ಅಮಾಯಕರನ್ನು ಶೋಷಿಸುವ ಮೂಲಕ ಸಮಾಜಕ್ಕೆ ಕಂಟಕವಾಗುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರಲ್ಲಿ ರಾಜಕಾರಣಿಗಳ ಬಗ್ಗೆ ಅಸಹನೆಯ ಭಾವನೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಸಮಾಜದ ಬಾಂಧವರ ಕಲ್ಯಾಣಕ್ಕಾಗಿ ಹಾಗೂ ಸಾಮರಸ್ಯ ಸಮುದಾಯ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮಿಸುತ್ತಿದೆ. ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಅವುಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ ಮೂಲಕ ಸಮಾಜದ ಎಲ್ಲ ವರ್ಗಗಳ ಜನರಿಗೆ ಸೇವೆ ಮಾಡುತ್ತಿದೆ ಎಂದು ಬಣ್ಣಿಸಿದರು.
ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ನಮ್ಮ ಸಮುದಾಯದ ಯುವಕರು ಸರ್ಕಾರದ ನೌಕರಿಗಾಗಿ ಕಾಯದೆ ಇರುವ ವೈವಿಧ್ಯಮಯ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಬೇಕು. ಉದ್ಯೋಗ ಪಡೆಯಲು ಹಪಹಪಿಸುವ ಬದಲಿಗೆ ಹತ್ತಾರು ಜನರಿಗೆ ಉದ್ಯೋಗದಾತರಾಗಿ ಸಮಾಜದ ಪ್ರಗತಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಒಂದೇ ಬಗೆಯ ಉದ್ಯಮವನ್ನು ಎಲ್ಲರೂ ಸ್ಥಾಪಿಸುವ ಬದಲಾಗಿ ಭಿನ್ನ ಭಿನ್ನ ಉದ್ಯಮಗಳನ್ನು ಆರಂಭಿಸಬೇಕು. ಈ ನಿಟ್ಟಿನಲ್ಲಿ ಯುವಕರಿಗೆ ಎಲ್ಲ ಬಗೆಯ ನೆರವು ಒದಗಿಸುವ ಮೂಲಕ ಯುವಕರ ಶಕ್ತಿ ಸಾಮರ್ಥ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ನಮ್ಮ ಸಮುದಾಯ ಹೆಚ್ಚು ಗಮನ ನೀಡಬೇಕು ಎಂದರು.
ನೇಗಿಲಯೋಗಿ ಅಧ್ಯಕ್ಷ ಡಿ.ರವಿಕುಮಾರ್ ಮಾತನಾಡಿ, ನಮ್ಮ ಸಮಾಜದ ಎಲ್ಲ ಜನರ ಅಭಿವೃದ್ಧಿಗಾಗಿ ಶಿಕ್ಷಣ ಉದ್ಯೋಗ ತರಬೇತಿ ಮತ್ತಿತರ ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯ ಮೂಲಕ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದು ನಮ್ಮ ಈ ಕಾರ್ಯಕ್ಕೆ ಅನೇಕ ಮಹನೀಯರು, ದಾನಿಗಳು ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರೆಲ್ಲರಿಗೂ ಸಂಸ್ಥೆ ಆಭಾರಿಯಾಗಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರಸ್ತುತ ಆಯೋಜಿಸಿರುವ ಉದ್ದಿಮೆ ಮತ್ತು ವೃತ್ತಿಪರರ ಸಮ್ಮಿಲನದ ಮೂಲಕ ಜೀವಿಗಳ ನಡುವೆ ಸಂಪರ್ಕ ಸೇತುಗಾಗಿ ಸಂಸ್ಥೆ ಕಾರ್ಯನಿರ್ವಹಿಸಲಿದೆ. ಸಮುದಾಯದ ಯುವ ಜನರ ಅನುಕೂಲಕ್ಕಾಗಿ ಹೆಚ್ಚಿನ ಸಹಕಾರ ನೀಡಬೇಕೆಂದು ಅವರು ಕೋರಿದರು.
ಸಂಸ್ಥೆಯ ಟ್ರಸ್ಟಿ ಇಂದ್ರೇಶ್, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳಿಗೆ ಕಾರ್ಯಕ್ರಮದ ವಿವರಗಳನ್ನು ಪರಿಚಯಿಸಿದರು. ಮೈಸೂರು ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಪಿ ವಿಶ್ವನಾಥ್, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಕೆಎಎಸ್‌ಎಸ್‌ಎಫ್‌ಐ ಜಂಟಿ ನಿರ್ದೇಶಕ ಸತೀಶ್, ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಶೋಭಾ ರಮೇಶ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಮಂಜೇಗೌಡ, ಗಂಗಾಧರಗೌಡ, ಡಾ.ಮೀನಾಕುಮಾರಿ, ಡಾ.ಎಸ್. ಯಶಸ್ವಿನಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಲಿಂಗರಾಜು, ಮುಖಂಡರಾದ ಮಂಜುನಾಥ್, ಶಿವಶಂಕರ್, ಲೇಖಕ ಡಾ ಬಲ್ಲೇನಹಳ್ಳಿ ವಿಜಯಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net