ಕತ್ತಿ-ಜಾರಕಿಹೊಳಿ ಕುಟುಂಬಗಳ ಮಧ್ಯೆ ವೈಮನಸ್ಸಿಲ್ಲ

3dvk 3
Published on

ಬೆಳಗಾವಿ: ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳ ಮಧ್ಯೆ ಯಾವುದೇ ವೈಮನಸ್ಸಿಲ್ಲ. ಆದರೆ ಇದನ್ನು ಈಗ ಯಾಕೆ ಹುಟ್ಟಿಸಿದ್ದಾರೆಯೋ ಗೊತ್ತಿಲ್ಲ. ಮಾಜಿ ಸಂಸದ ರಮೇಶ ಕತ್ತಿ ನನಗೆ ಇಂದಿಗೂ ಒಳ್ಳೆಯ ಮಿತ್ರ. ಆದರೆ ನಮ್ಮ ಸಮುದಾಯಕ್ಕೆ ಬೈದಿರುವುದು ನೋವಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕತ್ತಿ ಕುಟುಂಬ ಇವತ್ತಿಗೂ ನನಗೆ ಆತ್ಮೀಯ. ವೈಯಕ್ತಿಕವಾಗಿ ಬೈದಾಡಿ ಮಾತನಾಡಬಹುದು. ಆದರೆ ಸಾರ್ವಜನಿಕವಾಗಿ ಒಂದು ಸಮುದಾಯದ ಬಗ್ಗೆ ಆ ರೀತಿ ಮಾತನಾಡಿರುವುದು ಸರಿಯಲ್ಲ. ಈ ಮಾತಿಗೆ ನಾನೂ ಫೋನ್ ಮಾಡಿ ಬುದ್ಧಿವಾದ ಹೇಳಿದ್ದೇನೆ. ರಮೇಶ ಕತ್ತಿ ಸುಧಾರಿಸಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಅದರಿಂದ ಭವಿಷ್ಯದಲ್ಲಿ ನಿಖಿಲ್ ಕತ್ತಿಗೆ ಸಮಸ್ಯೆ ಆಗುತ್ತದೆ ಎಂದು ಎಚ್ಚರಿಸಿದ್ದೇನೆ ಎಂದರು.

ವಿದ್ಯುತ್ ಸಹಕಾರ ಸಂಘದ ಚುನಾವಣೆಗೆ ಪ್ರವೇಶಿಸುವುದು ಬೇಡ ಎಂದು ನಾನು ಮೊದಲೇ ಹೇಳಿದ್ದೆ. ನಾನು ಕೆಲ ದಿನ ವಿದೇಶಕ್ಕೆ ಹೋಗಿದ್ದಾಗ, ನಮ್ಮವರು ಈ ಚುನಾವಣೆಗೆ ಪ್ರವೇಶಿಸಿದ್ದರು. ಆ ಬಳಿಕ ಸಾಕಷ್ಟು ಬೆಳವಣಿಗೆಗಳಾಗಿವೆ. ಆದರೆ ಕತ್ತಿ ಆ ರೀತಿ ಮಾತನಾಡಬಾರದಿತ್ತು. ಒಂದೇ ಸಮುದಾಯದಿಂದ ಶಾಸಕರಾಗುವುದು ಸಾಧ್ಯವಿಲ್ಲ. ಎಲ್ಲ ಸಮುದಾಯದ ಆಶೀರ್ವಾದ ಬೇಕು. ಹೀಗಾಗಿ ಕತ್ತಿ ತನ್ನ ಮಾತಿನ ಶೈಲಿ ಬದಲು ಮಾಡಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಹಳ ಅನಾಹುತವಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net