ಮುನಿಸು ಮರೆತು ಕೈ ಜೋಡಿಸಿದ ವಿಶ್ವನಾಥ್

sudakar vishvanath
ಮುನಿಸು ಮರೆತು ಕೈ ಜೋಡಿಸಿದ ವಿಶ್ವನಾಥ್
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಡಾ.ಕೆ.ಸುಧಾಕರ್ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ನಡುವಿನ ಮುನಿಸು ಶಮನವಾಗಿದ್ದು ಹಿರಿಯ ನಾಯಕರ ಸಮ್ಮುಖದಲ್ಲಿ ಸುಖಾಂತ್ಯ ಕಾಣುತ್ತಿದ್ದಂತೆ ಚಿಕ್ಕಬಳ್ಳಾಪುರ ಮೈತ್ರಿ ಮುಖಂಡರಲ್ಲಿ ಹರ್ಷ ಮುಗಿಲುಮುಟ್ಟಿದೆ.
ಶಾಸಕ ವಿಶ್ವನಾಥ್ ಅಭ್ಯರ್ಥಿ ಸುಧಾಕರ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಬಹಿರಂಗವಾಗಿ ತಿಳಿಸಿ ವಿರೋಧ ವ್ಯಕ್ತಪಡಿಸಿದ್ದರು. ಪುತ್ರನಿಗೆ ಟಿಕೆಟ್ ನೀಡದ ಕಾರಣ ಮುನಿಸಿಕೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿ ಬಳಿಕ ಪರಿಸ್ಥಿತಿ ಬದಲಾಗಿದೆ. ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಸಮ್ಮುಖದಲ್ಲಿ ಸಂಧಾನ ಸಭೆ ನಡೆದು, ಕೊನೆಗೆ ಶಾಸಕರು ಸುಧಾಕರ್‌ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಂದಿದ್ದ ದೊಡ್ಡ ತಡೆಯೊಂದು ನಿವಾರಣೆಯಾಗಿದೆ.
ಬಿಜೆಪಿಯ ಒಡಕನ್ನೇ ಮತಗಳಾಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್ ತಂತ್ರ ರೂಪಿಸಿತ್ತು. ಬಿಜೆಪಿ ನಾಯಕರ ನಡುವಿನ ಸಮಸ್ಯೆ ಇನ್ನಷ್ಟು ಬೆಳೆಯಲಿದ್ದು, ಇದರಿಂದ ಕಾಂಗ್ರೆಸ್‌ಗೆ ಒಂದಷ್ಟು ಮತಗಳು ಬರಬಹುದೆಂಬ ಕಾಂಗ್ರೆಸ್ ನಾಯಕರ ಲೆಕ್ಕಾಚಾರಕ್ಕೆ ಇದರಿಂದ ಪೆಟ್ಟುಬಿದ್ದಂತಾಗಿದೆ.
ಕಮಲ ಪಾಳೆಯಕ್ಕೆ ಟಾನಿಕ್: ಈ ದಿಢೀರ್ ಬದಲಾವಣೆಯಿಂದ ಸುಧಾಕರ್ ಚೇತರಿಸಿಕೊಂಡಂತಾಗಿದ್ದು, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಸೇರಿ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಮುಖಂಡರ ಬೆಂಬಲ ಗಳಿಸಲು ಉತ್ಸುಕತೆ ತೋರುತ್ತಿದ್ದಾರೆ. ಈಗ ಯಲಹಂಕ ಕ್ಷೇತ್ರದಲ್ಲಿ ಸ್ವಪಕ್ಷೀಯರ ಸಂಪೂರ್ಣ ಬೆಂಬಲ ದೊರೆತಿರುವುದರಿಂದ ಕಮಲ ಪಾಳೆಯಕ್ಕೆ ಟಾನಿಕ್ ನೀಡಿದಂತಾಗಿದೆ.
ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಪೈಕಿ, ಯಲಹಂಕ ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಲೋಕಸಭಾ ಕ್ಷೇತ್ರದಲ್ಲಿ 19.50 ಲಕ್ಷ ಮತದಾರರಿದ್ದು, ಯಲಹಂಕ ವಿಧಾನಸಭಾ ಕ್ಷೇತ್ರವೊಂದರಲ್ಲೇ 4.45 ಲಕ್ಷ ಮತದಾರರಿದ್ದಾರೆ. ಹೀಗಾಗಿ ಇಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕರ ನಡುವಿನ ಮನಸ್ತಾಪವನ್ನು ಲಾಭಕ್ಕೆ ಬಳಸಿಕೊಳ್ಳಬಹುದೆಂದು ಕಾಂಗೆಸ್ ಲೆಕ್ಕಾಚಾರ ಹಾಕಿತ್ತು. ಇಲ್ಲಿ ಹೆಚ್ಚು ಮತ ಪಡೆದರೆ ಒಟ್ಟು ಮತ ಗಳಿಕೆಯ ಮೇಲೆ ನಿರ್ಣಾಯಕ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ತಲೆಗೆಳಗಾದಂತಾಗಿದೆ. ಇದರಿಂದ ಕಾಂಗ್ರೆಸ್ ಏಕಾಂಕಿ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಸವಾಲಿನ ಕೆಲಸವಾಗಲಿದೆ ಎಂಬ ಲೆಕ್ಕಾಚಾರ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net