

ತುಮಕೂರು : ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟ ಕ್ಷಣದಿಂದಲೇ ಮಂತ್ರಿಗಳೆಲ್ಲಾ ‘ಮಾಜಿ’ಗಳಾಗಿದ್ದಾರೆ. ಇನ್ನು ನಿಗಮ-ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರ ಅಧಿಕಾರಕ್ಕೆ ಹೊಸ ಸಿಎಂ ಅಧಿಕಾರವಹಿಸಿಕೊಂಡ ಬಳಿಕ ಸಂಚಕಾರ ಬಂದೊದಗುವ ಸಾಧ್ಯತೆ ಇದೆ.
ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಂಡು 2019ರಲ್ಲಿ ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು ವರ್ಷದವರೆಗೆ ನಿಗಮ-ಮಂಡಳಿ, ಸರ್ಕಾರಿ ಸಂಘ-ಸಂಸ್ಥೆ, ಸ್ಥಳೀಯ ಸಂಸ್ಥೆಗಳಿಗೆ ಕಾರ್ಯಕರ್ತರನ್ನು ನೇಮಿಸುವ ಸಾಹಸಕ್ಕೆ ಕೈಯಿಟ್ಟಿರಲಿಲ್ಲ. 2020ರಲ್ಲಿ ವಿವಿಧ ನಿಗಮ-ಮಂಡಳಿ, ಪ್ರಾಧಿಕಾರದ ಅಧ್ಯಕ್ಷ ಸ್ಥಾನಗಳಿಗೆ ಹಾಲಿ, ಮಾಜಿ ಶಾಸಕರು ಹಾಗೂ ಪಕ್ಷ ನಿಷ್ಠರನ್ನು ನೇಮಿಸಿ ಬಿಎಸ್‌ವೈ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು. ಈಗ ಯಡಿಯೂರಪ್ಪ ರಾಜೀನಾಮೆ ಬಳಿಕ ಸಹಜವಾಗಿ ಎಲ್ಲರೂ ಅಧ್ಯಕ್ಷ ಸ್ಥಾನ ಕಳೆದುಕೊಳ್ಳಲಿದ್ದಾರೆ.
ಸ್ವಯಂಪ್ರೇರಿತ ರಾಜೀನಾಮೆ?: ಜಿಲ್ಲೆಗೆ ನಿಗಮ-ಮಂಡಳಿ ನೇಮಕಾತಿಯಲ್ಲಿ ಹೆಚ್ಚು ಪ್ರಾತಿನಿಧ್ಯ ಕೊಡಲಾಗಿತ್ತು. ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್, ಇನ್ನು ಶಿರಾ ಉಪಸಮರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್ ಹಾಗೂ ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಅವರಿಗೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಗಿರಿ ವಹಿಸಲಾಗಿತ್ತು. ತುರುವೇಕೆರೆ ಶಾಸಕ ಮಸಾಲ ಜಯರಾಂ ಅವರನ್ನು ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಗೆ ನೇಮಿಸಲಾಗಿತ್ತು.
ಬಿಎಸ್‌ವೈ ನೇತೃತ್ವದ ಸರ್ಕಾರ ನೇಮಕ ಮಾಡಿರುವ ನಿಗಮ-ಮಂಡಳಿ ಅಧ್ಯಕ್ಷರು, ಸದಸ್ಯರು ಹೊಸ ಸಿಎಂ ಅಧಿಕಾರ ವಹಿಸಿಕೊಳ್ಳುವವರೆಗೆ ಅಧಿಕಾರದಲ್ಲಿ ನಿಶ್ಚಿಂತೆಯಾಗಿ ಮುಂದುವರಿಯಲಿದ್ದಾರೆ. ಅದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲಿರುವುದರಿಂದ ಸ್ವಯಂಪ್ರೇರಿತರಾಗಿ ಹಾಲಿ ಅಧ್ಯಕ್ಷರು ರಾಜೀನಾಮೆ ಕೊಡುವ ನಿರೀಕ್ಷೆಗಳು ಕಡಿಮೆ ಇದೆ. ನೂತನ ಮುಖ್ಯಮಂತ್ರಿ ಸೂಚನೆ ಕೊಡುವವರೆಗೆ ಯಾರೊಬ್ಬರು ಪದತ್ಯಾಗ ಮಾಡುವುದಿಲ್ಲ.
ಅಧಿಕಾರದಿಂದ ದೂರ ಉಳಿದ ನಾಗೇಶ್ : ಈ ಹಿಂದೆ ತೆಂಗು ನಾರು ಅಭಿವೃದ್ಧಿ ಮಂಡಳಿಯನ್ನು ಒಪ್ಪಿಕೊಳ್ಳದ ತಿಪಟೂರಿನ ಶಾಸಕ ಬಿ.ಸಿ.ನಾಗೇಶ್‌ಗೆ ನಂತರ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಮನವೊಲಿಸುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿದ್ದರು. ಆದರೆ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ನಾಗೇಶ್ ಅವರು ನಿಗಮ-ಮಂಡಳಿ ಸಹವಾಸಕ್ಕೆ ಹೋಗದೆ ಅಧಿಕಾರದಿಂದ ದೂರ ಉಳಿದಿದ್ದರು. ಈಗ ಹೊಸ ಸರ್ಕಾರದಲ್ಲಿ ನಾಗೇಶ್ ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದು ಒಂದು ವೇಳೆ ಅದು ಕೈತಪ್ಪಿದರೆ ಲಾಭದಾಯಕ ನಿಗಮಕ್ಕೆ ಲಾಬಿ ನಡೆಸಲಿದ್ದಾರೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.
ಬಿಎಸ್‌ವೈ ಬೆಂಬಲಿಗರಿಗೆ ಕೊಕ್...: ಬಿಎಸ್‌ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವವರಿಗೆ ನಿಗಮ-ಮಂಡಳಿ, ಪ್ರಾಧಿಕಾರದಿಂದ ಬಹುತೇಕ ಕೊಕ್ ಕೊಡುವುದು ನಿಶ್ಚಿತ. ಶಿರಾ ಉಪಸಮರ ಸಂದರ್ಭದಲ್ಲಿ ಡಾ.ಸಿ.ಎಂ.ರಾಜೇಶ್‌ಗೌಡರಿಗೆ ಟಿಕೆಟ್ ತ್ಯಾಗ ಮಾಡಿದ್ದ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ ಅವರಿಗೆ ಯಡಿಯೂರಪ್ಪ ಭರವಸೆ ಕೊಟ್ಟಂತೆ ನಿಗಮ-ಮಂಡಳಿಗೆ ಅಧ್ಯಕ್ಷ ಸ್ಥಾನದ ಹುದ್ದೆ ಒಲಿದುಬಂದಿತ್ತು. ಈಗ ಅಧ್ಯಕ್ಷ ಗಾದಿ ಕೈತಪ್ಪುವ ಸಾಧ್ಯತೆಗಳಿವೆ. ಒಂದು ವೇಳೆ ಬಿಎಸ್‌ವೈ ಸೂಚಿಸಿದ್ದವರಯ ಯಾದರೂ ಸಿಎಂ ಆದಲ್ಲಿ ಹಾಲಿ ನಿಗಮ-ಮಂಡಳಿ ಅಧ್ಯಕ್ಷರು ಬಹುತೇಕ ಮುಂದಿನ ಆದೇಶದವರೆಗೆ ಮುಂದುವರಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಕೆ.ಎಸ್.ಕಿರಣ್‌ಕುಮಾರ್, ಅಧ್ಯಕ್ಷ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿಮುಂದಿನ ಆದೇಶದವರೆಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದೇವೆ. ಹೊಸ ಸಿಎಂ ಬಂದ ಬಳಿಕ ಸರ್ಕಾರ ಹೊರಡಿಸುವ ಆದೇಶದವರೆಗೆ ಹುದ್ದೆಯಲ್ಲಿ ಇರುತ್ತೇವೆ. ನಮ್ಮನ್ನೇ ಮುಂದುವರಿಸುತ್ತಾರೆ ಎಂಬ ಬಗ್ಗೆ ನನಗಂತೂ ಗೊತ್ತಿಲ್ಲ. ಹೊಸ ಸಿಎಂ ಅಧಿಕಾರ ವಹಿಸಿಕೊಳ್ಳುವ ಮುನ್ನ ನಿಗಮ-ಮಂಡಳಿ ಅಧ್ಯಕ್ಷರು, ಸದಸ್ಯರು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಬೇಕು. ದೊಡ್ಡತನ ಇರೋರು ನೂತನ ಸರ್ಕಾರ ಸೂಚನೆ ನೀಡುವ ಮುನ್ನವೇ ರಾಜೀನಾಮೆ ಕೊಟ್ಟು ಬರುತ್ತಾರೆ. ಇನ್ನಷ್ಟು ಕಾರ್ಯಕರ್ತರಿಗೆ ಸರ್ಕಾರದ ಅಧಿಕಾರದಲ್ಲಿ ಭಾಗವಾಗಲು ಸಾಧ್ಯವಾಗಲಿದೆ. ಎಂ.ಬಿ.ನಂದೀಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ