ರಾಜಕಾರಣಿಯ ಪುತ್ರನ ಕಾರು ಅಪಘಾತ, ದ್ವಿಚಕ್ರ ವಾಹನ ಸವಾರರಿಬ್ಬರಿಗೂ ಗಾಯ..

Accident
Published on

ಬೆಂಗಳೂರು: ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ಪುತ್ರ ವೇಗವಾಗಿ ಚಲಾಯಿಸಿದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸವಾರರಿಬ್ಬರು ಗಾಯಗೊಂಡಿರುವ ಘಟನೆ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

ಜಯನಗರದ ಯಶ್ ಗೌಡ(28) ಮತ್ತು ನಿಖಿತಾ(21) ಗಾಯಗೊಂಡ ದ್ವಿಚಕ್ರ ವಾಹನ ಸವಾರರು. ಈ ಇಬ್ಬರು ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದಾಖಲಿಸಲಾಗಿದೆ. ಸದ್ಯಕ್ಕೆ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೋರಾಯನಪಾಳ್ಯ ನಿವಾಸಿ ಜಾಹೀದ್ ವಾಜೀದ್ (24) ಅಪಘಾತ ಎಸಗಿದ ಕಾರು ಚಾಲಕ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ 1.15ರ ಸಮಾರಿಗೆ ಅಲಿ ಅಸ್ಕರ್ ರಸ್ತೆಯ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನ ಹಾಗೂ ಕಾರು ಜಖಂಗೊಂಡಿದ್ದು, ಎರಡೂ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಸಂಬಂಧಿಕರ ಮನೆಗೆ ತೆರಳುವಾಗ ಘಟನೆ: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಯಶ್‌ ಗೌಡ ಹಾಗೂ ನಿಖಿತಾ ಸ್ನೇಹಿತರಾಗಿದ್ದು, ಭಾನುವಾರ ಮಧ್ಯಾಹ್ನ ವಸಂತನಗರದಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಅಲಿ ಅಸ್ಕರ್ ರಸ್ತೆಯಲ್ಲಿ ತೆರಳುವಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯಶ್‌ ಗೌಡ ಹಾಗೂ ನಿಖಿತಾ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಇಬ್ಬರಿಗೂ ಗಾಯಗಳಾಗಿ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ದರು.

ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಪಾಲಕರೊಂದಿಗೆ ಚರ್ಚಿಸಿ ದೂರು ನೀಡುವುದಾಗಿ ಗಾಯಾಳುಗಳು ಹೇಳಿದ್ದಾರೆ. ಸದ್ಯಕ್ಕೆ ಎರಡು ವಾಹನಗಳನ್ನು ಜಪ್ತಿ ಮಾಡಿ ಠಾಣೆಗೆ ತರಲಾಗಿದೆ. ಗಾಯಾಳುಗಳ ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net