

ಮೈಸೂರು: ಕಲಾವಿದರಿಗಿಂತ ರಾಜಕಾರಣಿಗಳ ನಾಟಕವೇ ಆಕರ್ಷಕವಾಗಿ ಕಾಣುತ್ತಿದ್ದು, ಇವರಿಂದಾಗಿ ಸಮಾಜದಲ್ಲಿ ಸೌಹಾರ್ದತೆ ಕದಡುತ್ತಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ವಿಷಾದಿಸಿದರು.
ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಕರ್ನಾಟಕ ನಾಟಕ ಅಕಾಡೆಮಿಯಿಂದ ನಗರದ ಹಾರ್ಡ್ವಿಕ್ ಶಾಲೆಯಲ್ಲಿ ಆಯೋಜಿಸಿರುವ ಏಳು ದಿನಗಳ ಶೈಕ್ಷಣಿಕ ರಂಗಭೂಮಿ ರಾಷ್ಟ್ರೀಯ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ರಂಗಭೂಮಿ, ದೂರದರ್ಶನ, ಸಿನಿಮಾ ಕಲಾವಿದರಿಗಿಂತಲೂ ಈಗಿನ ರಾಜಕಾರಣಿಗಳ ನಾಟಕವೇ ಆಕರ್ಷಕವಾಗಿದೆ. ಆದರೆ, ರಾಜಕಾರಣಿಗಳ ನಾಟಕಗಳು ನೀಡುತ್ತಿರುವ ಸಂದೇಶಗಳು ಕೋಮು ಸೌಹಾರ್ದತೆ, ಎಲ್ಲರನ್ನು ಒಳಗೊಳ್ಳುವ ಗುಣ, ಸಹೋದರತ್ವವನ್ನು ಕದಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ರಾಜಕಾರಣಿಗಳಿಂದ ದೇಶದ ಬಹುತ್ವ ನಾಶವಾಗುತ್ತಿದೆ. ಭ್ರಷ್ಟಾಚಾರ, ಸರ್ವಾಧಿಕಾರತ್ವ ದೇಶದಾದ್ಯಂತ ಚಾಚಿದೆ. ಏಕಮುಖಿ ಸಂಸ್ಕೃತಿ ಪ್ರತಿಪಾದಿಸುತ್ತಿರುವವರೇ ದೇಶಭಕ್ತರಾಗಿದ್ದಾರೆ. ಅವರನ್ನು ಪ್ರಶ್ನಿಸುವವರು ದೇಶದ್ರೋಹಿಗಳಾಗುತ್ತಿದ್ದಾರೆ. ವಿಭಜನಕಾರಿ ಸಿದ್ಧಾಂತಗಳನ್ನು ಮಕ್ಕಳಿಗೆ ತುಂಬಲಾಗುತ್ತಿದೆ. ಹೀಗಾಗಿ ಕಲಾವಿದರು ಎಚ್ಚರಿಕೆ ಹಾಗೂ ಬದ್ಧತೆಯಿಂದ ಬಹುತ್ವ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಮಕ್ಕಳಿಗೆ ವರ್ತಮಾನ ಹಾಗೂ ಬಹುತ್ವದ ಪರಂಪರೆಯ ಅರಿವು ಮೂಡಿಸಲು ರಂಗಭೂಮಿ ಕಾರ್ಯಾಗಾರಗಳನ್ನು ನಡೆಸಬೇಕಿದೆ. ರಂಗಭೂಮಿಯಿಂದ ಜಾಗೃತಿ ಮೂಡಿಸುವ ಕೆಲಸ ಅಗಬೇಕು ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಬಾಲ್ಯ ಸಂವೃದ್ಧಿಯಿಂದ ಕೂಡಿದ್ದರಿಂದ 20 ವರ್ಷದ ಹಿಂದೆ ಮಕ್ಕಳಿಗೆ ರಂಗಭೂಮಿ ಬೇಕೆ ಎಂಬ ಪ್ರಶ್ನೆ ಮೂಡಿತ್ತು. ಆದರೆ ಈಗ ಮೊಬೈಲ್‌ನ ವರ್ಚ್ಯುವಲ್ ಜಗತ್ತಿನೊಳಗೆ ಸಿಲುಕಿದ್ದಾರೆ. ಅವರಿಗೆ ವಾಸ್ತವ ಜಗತ್ತನ್ನು ಅರ್ಥ ಮಾಡಿಸುವುದು ಸವಾಲಾಗಿದೆ. ಹಾಗಾಗಿ ರಂಗಭೂಮಿ ಇಂದಿನ ಮಕ್ಕಳಿಗೆ ಅನಿವಾರ್ಯವಾಗಿದೆ ಎಂದರು.
ರಂಗಭೂಮಿಯು ಬಹುಶಿಸ್ತೀಯ ಕಲಿಕೆಯನ್ನು ನೀಡಲಿದ್ದು, ವರ್ಚ್ಯುವಲ್ ಜಗತ್ತು ಸೃಷ್ಟಿಸಿರುವ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಕೊಡಲಿದೆ. ಜೀವನವನ್ನು ಎದುರಿಸುವ ಕಲೆಯನ್ನು ನೀಡಲಿದೆ ಎಂದು ಹೇಳಿದರು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯಾದ ರಂಗ ನಿರ್ದೇಶಕ ಪ್ರಸನ್ನ ಮಾತನಾಡಿ, ದೇಶದ ಶೇ.50ರಷ್ಟು ಮಕ್ಕಳು ಖಿನ್ನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮೊಬೈಲ್ ಗೇಮಿಂಗ್, ವರ್ಚ್ಯುವಲ್ ಜಗತ್ತು ಬಾಲ್ಯವನ್ನು ಕಿತ್ತುಕೊಳ್ಳುತ್ತಿದೆ. ದೇಶದ ಆಡಳಿತ ವ್ಯವಸ್ಥೆಯು ಮಕ್ಕಳನ್ನು ಮರೆತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ರಂಗಭೂಮಿ ಇದಕ್ಕೆಲ್ಲಾ ಚಿಕಿತ್ಸೆ ನೀಡಬಲ್ಲದು ಎಂದು ಅಭಿಪ್ರಾಯಪಟ್ಟರು.
ನಟರಾದ ಅಮಿತಾಬ್ ಬಚ್ಚನ್, ಇರ್ಫಾನ್ ಖಾನ್ ಸೇರಿದಂತೆ ಮೇರು ನಟರು ರಂಗಭೂಮಿ ಹಿನ್ನೆಲೆಯವರು. ಅವರಲ್ಲಿ ಸಹಜ ಅಭಿನಯ ಕಾಣುತ್ತಿದ್ದೆವು. ಈಗಿನ ಕಲಾವಿದರಿಗೆ ರಂಗಭೂಮಿಯಲ್ಲದೆ ಸಿನಿಮಾ, ಒಟಿಟಿ ವೇದಿಕೆಗಳಿವೆ. ಅವರಲ್ಲಿ ಸೃಜನಶೀಲತೆ, ಅನುಭವ ಕೊರತೆ ಕಾಣುತ್ತಿದೆ ಎಂದು ವಿಷಾದಿಸಿದರು. ಕಾರ್ಯಾಗಾರದ ನಿರ್ದೇಶಕ ರಜನೀಶ್ ಬಿಸ್ತ್ ಇದ್ದರು.