

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಧಾನಸೌಧದಲ್ಲಿನ ರಾಜಕಾರಣಿಗಳು ಹಾಗೂ ಅಧಿಕಾರಿಗಳೇ ಕನ್ನಡದ ನಿಜವಾದ ಶತ್ರುಗಳು. ಅವರ ಮಕ್ಕಳು ವಿದೇಶದಲ್ಲಿ ಓದಿ ಬಂದು ಶಾಸಕ, ಸಚಿವರಾಗುತ್ತಿದ್ದಾರೆ. ಇಂತಹವರೇ ಕನ್ನಡದ ಶತ್ರುಗಳು. ಕನ್ನಡಕ್ಕೆ ನಿಜವಾದ ರಕ್ಷಕರು, ಶಕ್ತಿ ಕೊಡುವವರು ಮಕ್ಕಳು, ಶಿಕ್ಷಕರು ಎಂದು ಹಿರಿಯ ಸಾಹಿತಿ ಡಾ. ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯೋತ್ಸವ, ಕರ್ನಾಟಕ ನಾಮಕರಣ-50ರ ಸಂಭ್ರಮ ನಿಮಿತ್ತ ಏರ್ಪಡಿಸಿದ್ದ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಮೇಲೆ ಅನೇಕ ಭಾಷೆಗಳಿಂದ ದಾಳಿ ನಡೆಯುತ್ತಿದೆ. ಕೇಂದ್ರದವರು ಹಿಂದಿ ಹಾಗೂ ರಾಜ್ಯದವರು ಆಂಗ್ಲ ಭಾಷೆಯನ್ನು ಒತ್ತಾಯವಾಗಿ ಹೇರುತ್ತಿದ್ದಾರೆ. ಆದರೆ ನಾವು ಬೇರೆ ಭಾಷೆಯನ್ನು ಎಲ್ಲಿ ಇಡಬೇಕೋ ಅಲ್ಲಿ ಇಡಬೇಕು. ಕನ್ನಡಕ್ಕೆ ಅನ್ನ ಕೊಡುವ ಶಕ್ತಿ ಇದೆ. ಭಾರತವನ್ನು ಪ್ರೀತಿಸುವ ಮಕ್ಕಳನ್ನು ಬೆಳೆಸುವುದು, ಕನ್ನಡ ನಾಡು-ನುಡಿ ಉಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು ಎಂದರು.
ರಾಜ್ಯ ಹಾಗೂ ದೇಶವನ್ನು ಕಾಪಾಡುವ ಶಕ್ತಿ ಗ್ರಾಮೀಣ ಮಕ್ಕಳಲ್ಲೇ ಹೆಚ್ಚಿದೆ. ಹಳಗನ್ನಡ ಸಾಹಿತ್ಯ ಓದಿದಾಗ ಮಾತ್ರ ಕನ್ನಡ ಸಾಹಿತ್ಯದಲ್ಲಿ ಪ್ರೀತಿ ಹುಟ್ಟಲು ಸಾಧ್ಯ. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಮಾತನಾಡುವ ಸ್ವಾತಂತ್ರ್ಯ ನೀಡಬೇಕು. ಇಂದಿನ ಮೊಬೈಲ್ ಯುಗದಲ್ಲಿ ಭಾಷೆಯನ್ನು ಟ್ರಿಮ್ ಮಾಡುತ್ತಿದ್ದೇವೆ. ಅದು ಭಾಷೆಯನ್ನು ಪರಿರ್ಪೂಣವಾಗಿ ಬಳಸಲು ತಡೆ ಹಿಡಿಯುತ್ತಿದೆ. ಸಂಬಂಧ ವಾಚಕ ಪದಗಳೇ ಇಲ್ಲದ ಭಾಷೆ ಇಂಗ್ಲಿಷ್. ಕನ್ನಡ ಸಂಬಂಧಕ ವಾಚಕ ಭಾಷೆಯಾಗಿದೆ. ಇಂತಹ ಭಾಷೆ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಬೇಂದ್ರೆ, ಚಂಪಾ, ಚನ್ನವಿರ ಕಣವಿ, ಗೋವಿಂದ ರಾಜ್ ಸೇರಿ ಅನೇಕರಿದ್ದಾರೆ ಎಂದರು.
ಕಸಾಪ ಅಧ್ಯಕ್ಷ ಮಹೇಶ ಜೋಶಿ ಮನಸ್ಸು ಮಾಡಿ ಈ ಭಾಗದ ಮಹಿಳಾ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಲಿ. ಎಲ್ಲ ಚಳವಳಿಗೆ ತೊಟ್ಟಿಲು ಧಾರವಾಡ. 1980ರಿಂದ ನಡೆದ ಚಳವಳಿಗಳಲ್ಲಿ ಭಾಗವಹಿಸಿದ್ದೇನೆ. ಇದೇ ಕಾರಣಕ್ಕೆ ನಾನು ವಿಶ್ವ ವಿದ್ಯಾಯದ ಪ್ರಾಡೆಕ್ಟ್ ಆಗದೆ ಚಳವಳಿ ಪ್ರಾಡಕ್ಟ್ ಆಗಿದ್ದೇನೆ. ಧರೆಗೆ ದೊಡ್ಡವರು ಎಂಬ ಸನ್ಮಾನ ನೋಬೆಲ್ ಪ್ರಶಸ್ತಿಗೂ ಮಿಗಿಲಾದದ್ದು. ಇಂತಹ ಗೌರವ ನೀಡಿದ ಸಂದ ಪದಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಕುಂವಿ ಬದುಕು ಕುರಿತು ಕವಿ ಪ್ರಮೋದ ತುರವಿಹಾಳ, ಕುಂವಿ ಸಾಹಿತ್ಯ ಕುರಿತು ಮೆಹಬೂಬ ಮಠದ ಮಾತನಾಡಿದರು. ಸಂಘದ ಉಪಾಧ್ಯೆಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಶಿವಾನಂದ ಭಾವಿಕಟ್ಟಿ, ಶಂಕರ ಕುಂಬಿ, ಇತರರು ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಧನವಂತ ಹಾಜವಗೋಳ ನಿರೂಪಿಸಿದರು.
ನೀಡಲಿ ಅನುದಾದನ
ಕನ್ನಡ ಎಂದರೆ ಕರ್ನಾಟಕ ವಿದ್ಯಾವರ್ಧಕ ಸಂ, ಸಂ ಎಂದರೆ ಕನ್ನಡ ಎನ್ನುವಂತಾಗಿದೆ. ಕರ್ನಾಟಕದಲ್ಲಿ ಕನ್ನಡ ಗಟ್ಟಿಗೊಳಿಸಿದ ಸಂಘವು ರಾಜಧಾನಿಯಿಂದ ದೂರ ಇರುವ ಕಾರಣಕ್ಕೆ ಸರ್ಕಾರದಿಂದ ಅಸಮರ್ಪಕ ಅನುದಾನ ಸಿಗದಿರುವುದು ಕಳವಳಕಾರಿ ಸಂಗತಿ. ರಾಜಕಾರಣಿಗಳು ಗಟ್ಟಿ ಹಿಡಿದು ವರ್ಷಕ್ಕೆ ಒಂದು ಕೋಟಿ ರೂ. ಅನುದಾನ ಕೊಡಿಸುವ ಕೆಲಸ ಮಾಡಬೇಕು. ಕನ್ನಡ ನೆಲ,ಜಲ, ಭಾಷೆಗೆ ಶ್ರಮಿಸುತ್ತಿರುವ ಸಂಘಕ್ಕೆ ತಕ್ಷಣವೇ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಕುಂವಿ ಆಗ್ರಹಿಸಿದರು.